ಕುಮಟಾ : ಮೆದುಳು ಮತ್ತು ನರರೋಗ ತಜ್ಞ ವೈದ್ಯರಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತ ಭರವಸೆಯ ಕುಡಿಯಾಗಿರುವ ಡಾ.ಸುಮಂತ್ ಜಯದೇವ ಬಳಗಂಡಿ ಅವರನ್ನು “ಹವ್ಯಕ ವಿದ್ಯಾ ರತ್ನ” ಪ್ರಶಸ್ತಿ ನೀಡಿ ಪುರಸ್ಕರಿಸಲು ಶ್ರೀ‌ ಅಖಿಲ ಹವ್ಯಕ ಮಹಾಸಭೆ ಆಯ್ಕೆಮಾಡಿದ್ದು,ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ಅವರನ್ನು ಅಧಿಕೃತವಾಗಿ ಆಹ್ವಾನಿಸಿದೆ.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ತೃತೀಯ ‘ವಿಶ್ವ ಹವ್ಯಕ ಸಮ್ಮೇಳನ’ದಲ್ಲಿ ಹಮ್ಮಿಕೊಂಡಿರುವ ಈ ಭವ್ಯ ಸಮಾರಂಭದಲ್ಲಿ ಡಿ.28 ರಂದು ಪ್ರಶಸ್ತಿ- ಸನ್ಮಾನ ಸ್ವೀಕರಿಸಲು ತಾನು ಕುಟುಂಬದವರೊಂದಿಗೆ ಪಾಲ್ಗೊಳ್ಳುತ್ತಿರುವುದಾಗಿ ಡಾ.ಸುಮಂತ್ ಬಳಗಂಡಿ ತಮ್ಮ ಹರ್ಷ ವ್ಯಕ್ತಪಡಿಸಿದ್ದಾರೆ.

RELATED ARTICLES  ಎಂ. ಕೆ. ಹೆಗಡೆಯವರಿಗೆ 'ಸೌರಭ' ಸಂಸ್ಥೆಯಿಂದ ಶ್ರದ್ಧಾಂಜಲಿ.

ಮುಂಬರುವ 2025 ಫೆಬ್ರುವರಿ ಯಲ್ಲಿ ನವದೆಹಲಿಯಲ್ಲಿ ಜರುಗಲಿರುವ ಅಂತರರಾಷ್ಟ್ರೀಯ ಮಟ್ಟದ 15 ನೇ ‘ಏಶಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ‘ನಲ್ಲಿ ಭಾಗವಹಿಸಿ ತನ್ನ ಅಧ್ಯಯನ ಪ್ರಬಂಧ ಮಂಡಿಸುವ ಅಪೂರ್ವ ಸದವಕಾಶ ತನಗೆ ಲಭಿಸಿದ್ದು, ಈಗಾಗಲೇ ಈ ಕುರಿತಾಗಿ ಅಧಿಕೃತ ಆಹ್ವಾನ ಪಡೆದಿರುವುದಾಗಿಯೂ ಈ ಸಂದರ್ಭದಲ್ಲಿ ಅವರು ಮಾಹಿತಿ ನೀಡಿದರು.

ಇವರು ಎಂಬಿಬಿಎಸ್ ಪದವಿ ಪಡೆದ ನಂತರ ಜನರಲ್ ಮೆಡಿಸಿನ್ ವಿಷಯದಲ್ಲಿ ಎಮ್.ಡಿ.ಮತ್ತು ಡಿ.ಎನ್.ಬಿ.ಸ್ನಾತಕೋತ್ತರ ಪದವಿಗಳನ್ನು ಪಡೆದು,ಅಂತರರಾಷ್ಟ್ರೀಯ ಮನ್ನಣೆ ಪಡೆದ ಬೆಂಗಳೂರಿನ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ(ನಿಮ್ಹಾನ್ಸ್) ನಡೆಸಿದ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಯಲ್ಲಿ ಪ್ರಥಮ ಯತ್ನ ದಲ್ಲಿಯೇ ದಾಖಲೆಯ ಅಂಕಗಳನ್ನು ಪಡೆದು ಆಯ್ಕೆಯಾಗಿ ಪ್ರವೇಶ ಪಡೆದು ನ್ಯೂರೋಲೊಜಿಯಲ್ಲಿ 3 ವರ್ಷಗಳ ಡಿ.ಎಮ್.ಸೂಪರ್ ಸ್ಪೆಶಲೈಸೇಶನ್ ಕೋರ್ಸ್ ನ್ನು ಯಶಸ್ವಿಯಾಗಿ ಪೂರೈಸಿರುತ್ತಾರೆ.

RELATED ARTICLES  ದೆಹಲಿಗೆ ಹೊರಟ ಸಂಗ್ರಹಿತ ಮೃತ್ತಿಕೆ.

ಪ್ರತಿಭಾವಂತರಾಗಿರುವ ಇವರು ಪಠ್ಯ,ಪಠ್ಯೇತರ ವಿಷಯಗಳಲ್ಲಿ ರಾಜ್ಯ,ರಾಷ್ಟ್ರ ಮಟ್ಟದ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ವೇದ, ಉಪನಿಷತ್ತು ,ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ,ಲಘು ಸಂಗೀತಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

ಡಾ.ಸುಮಂತ್ ಜಯದೇವ ಬಳಗಂಡಿ ಅವರು ಪ್ರಸ್ತುತ ಶಿವಮೊಗ್ಗಾ ಜಿಲ್ಲೆಯ ಸಾಗರದ ಪ್ರತಿಷ್ಠಿತ ‘ಭಾಗವತ್ ಆಸ್ಪತ್ರೆ’ ಯಲ್ಲಿ ಮೆದುಳು ಹಾಗೂ ನರ ರೋಗ ತಜ್ಞ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.