ಸಿದ್ದಾಪುರ: ತಾಲೂಕಿನ ಹಿರಿಯ ಪತ್ರಕರ್ತ ಕೆಕ್ಕಾರ ನಾಗರಾಜ ಭಟ್ಟರಿಗೆ ಬೆಂಗಳೂರಿನಲ್ಲಿ ಡಿ.27 ರಿಂದ ಜರುಗುತ್ತಿರುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಹವ್ಯಕ ಸಾಧಕ ರತ್ನ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದೆ. ಸಿದ್ದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಉ.ಕ.ಜಿಲ್ಲಾ 14ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಂಚಾಲಕರಾಗಿ ಸೇವೆ ಸಲ್ಲಿಸಿರುವ ಭಟ್ಟರು ಪ್ರಸ್ತುತ ಭಾರತಸೇವಾದಳದ ಸಿದ್ದಾಪುರ ತಾಲೂಕು ಘಟಕದ ಅಧ್ಯಕ್ಷರಾಗಿ, ಉ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ನಾಡಿನ ಅನೇಕ ದಿನಪತ್ರಿಕೆಗಳಲ್ಲಿ, ಸಾಪ್ತಾಹಿಕಗಳಲ್ಲಿ ಇವರ ಸಾವಿರಾರು ಲೇಖನಗಳು ಪ್ರಕಟಗೊಂಡಿವೆ. ಸಂಯುಕ್ತ ಕರ್ನಾಟಕ, ವಿಶ್ವವಾಣಿ, ಜನಮಾಧ್ಯಮ, ಹೊಸದಿಗಂತ ದಿನಪತ್ರಿಕೆಗಳ ಸಿದ್ದಾಪುರ ತಾಲೂಕಾ ವರದಿಗಾರನಾಗಿ ಸೇವೆ ಸಲ್ಲಿಸಿರುವ ಇವರು ಲೋಕಧ್ವನಿ ಪತ್ರಿಕೆಯ ನಲಿವುಗರಿಯಲ್ಲಿ ಸಿದ್ದಾಪುರ ತಾಲೂಕಿನಲ್ಲಿ ನಡೆದ ಸ್ವಾತಂತ್ರ್ಯ ಹೋರಾಟ, ಸ್ಥಳ ವಿಶೇಷ, ವಿವಿಧ ಕ್ಷೇತ್ರಗಳ ಸಾಧಕರ ಕುರಿತು ನಿರಂತರವಾಗಿ ಸರಣಿ ಲೇಖನಗಳನ್ನು ಪ್ರಕಟಿಸುತ್ತಿದ್ದಾರೆ.

ಶ್ರೀ ಅಖಿಲಹವ್ಯಕ ಮಹಾಸಭಾ ಬೆಂಗಳೂರು ಅವರಿಂದ ಪತ್ರಿಕೋದ್ಯಮ ಹಾಗೂ ಸಾಮಾಜಿಕ ಕ್ಷೇತ್ರ ದಲ್ಲಿನ ಅನುಪಮ ಸೇವೆಗಾಗಿ ವಿದ್ವತ್ ಸಂಮಾನ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಜಿ.ಎಸ್.ಹೆಗಡೆ ಅಜ್ಜಿಬಳ ದತ್ತಿನಿಧಿ ಪ್ರಶಸ್ತಿ, ಲಯನ್ಸ್ ಸಂಸ್ಥೆಯಿಂದ ಬಹುಮುಖಿ ಸೇವೆಗಾಗಿ ಸನ್ಮಾನ, ಶ್ರೀಆಂಜನೇಯ ಕೃಪಾ ಯಕ್ಷವೃಂದ ಕೇಡಲಸರ ಇವರಿಂದ ಯಕ್ಷಗಾನ ಕಲಾವಿದರು ಹಾಗೂ ಯಕ್ಷಗಾನ ಪ್ರದರ್ಶನ ಕುರಿತ ವಿಮರ್ಶಾತ್ಮಕ ಬರವಣಿಗೆಗಾಗಿ ಯಕ್ಷರಾಜ ಪ್ರಶಸ್ತಿ, ಬೆಂಗಳೂರಿನ ಸಾಂಸ್ಕೃತಿಕ, ಸಾಮಾಜಿಕ ಸಂಘಟನೆ ಆಭಾರಿಯಿಂದ ಗೌರವ ಸಂಮಾನ, ಕನ್ನಡ ಸೇನೆ ಸಂಘಟನೆಯಿಂದ ಕದಂಬ ರತ್ನ ಪ್ರಶಸ್ತಿ, ಕರ್ನಾಟಕ ಕ್ಷತ್ರಿಯ ಮರಾಠ ಮಹಾ ಒಕ್ಕೂಟದಿಂದ ಕನ್ನಡ ಭೂಷಣ ಪ್ರಶಸ್ತಿ, ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಕೆ.ಶ್ಯಾಮರಾವ್ ಪ್ರಶಸ್ತಿ, ರಂಗ ಸೌಗಂಧ ಸಂಘಟನೆಯಿಂದ ರಂಗಭೂಮಿ ಹಾಗೂ ರಂಗ ಪ್ರದರ್ಶನಗಳ ಕುರಿತ ವಿಮರ್ಶಾತ್ಮಕ ಲೇಖನಗಳಿಗಾಗಿ ರಂಗ ಗೌರವ ಪ್ರಶಸ್ತಿ, ತಾಲೂಕು ಆಡಳಿತ ಸಿದ್ದಾಪುರ, ತಾಲೂಕು ಪಂಚಾಯತ, ಪಟ್ಟಣ ಪಂಚಾಯಿತಿ ಹಾಗೂ ತಾಲೂಕಿನ ವಿವಿಧ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಸ್ವಾತಂತ್ರೋತ್ಸವ ದಿನಾಚರಣೆಯಂದು ತಾಲೂಕಿನ ಸಮಸ್ತ ಜನತೆಯ ಪರವಾಗಿ ಗೌರವ ಸಂಮಾನ, ವಿಶ್ವದರ್ಶನ ಸಂಘಟನೆಯಿಂದ ಹಂಪಿಯ ಕಮಲಾಪುರದಲ್ಲಿ ಏರ್ಪಡಿಸಿದ್ದ ನಾಲ್ಕನೇ ಭಾವೈಕ್ಯ ಸಮ್ಮೇಳನದಲ್ಲಿ ಮಾಧ್ಯಮ ಕ್ಷೇತ್ರದಲ್ಲಿನ ಸಾಧನೆಗಾಗಿ ವಿಶ್ವ ಕನ್ನಡ ಮಾಧ್ಯಮ ಭೂಷಣ ರಾಷ್ಟ್ರೀಯ ಪ್ರಶಸ್ತಿ, ಹಾವೇರಿಯ ಅಖಿಲ ಕರ್ನಾಟಕ ಸ್ವಾತಂತ್ರ್ಯಯೋಧರ ಉತ್ತರಾಧಿಕಾರಿಗಳ ಸಂಘ (ರಿ) ಇವರ ವತಿಯಿಂದ ಏರ್ಪಡಿಸಿದ್ದ ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ದ್ವಿತೀಯ ಸಮ್ಮೇಳನ ಮತ್ತು ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೋತ್ಸವ-2024 ಕಾರ್ಯಕ್ರಮದಲ್ಲಿ ವಿಧಾನಸಭೆಯ ಉಪಸಭಾಪತಿ ರುದ್ರಪ್ಪ ಲಮಾಣಿ ಹಾಗೂ ಸಂಘಟನೆಯ ಅಧ್ಯಕ್ಷ ಮೃತ್ಯುಂಜಯ ಕುಲಕರ್ಣಿ ಅವರಿಂದ ನಾಗರಾಜ ಭಟ್ಟರಿಗೆ ಗೌರವ ಸಂದಿದೆ.

RELATED ARTICLES  ಅಕ್ರಮವಾಗಿ ಸಾಗಿಸುತ್ತಿದ್ದ ಜಾನುವಾರುಗಳು ಪೊಲೀಸರ ವಶಕ್ಕೆ.

ಇವರು ಸಿದ್ದಾಪುರದಲ್ಲಿ ನಡೆದ ಅಪ್ರತಿಮ ಸ್ವಾತಂತ್ರ್ಯ ಸಂಗ್ರಾಮ ಕುರಿತ ದಕ್ಷಿಣದ ಬಾರ್ಡೋಲಿ ಸಿದ್ದಾಪುರದ ಗಂಡುಗಲಿಗಳು ಕೃತಿಯನ್ನು ಹೊರತಂದಿದ್ದು ಸದರಿ ಕೃತಿಯನ್ನು ಅವಲೋಕಿಸಿದ ದೇಶದ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ಕೃತಿಯ ಕುರಿತು ಮೆಚ್ಚುಗೆ ಪತ್ರ ಕಳಿಸಿದ್ದಾರೆ.

RELATED ARTICLES  ಶಿರಸಿಯ ಸೋಂದಾ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆ: ಸಂಸದ ಅನಂತ ಕುಮಾರ್ ಭಾಗಿ