ದೀಪಾವಳಿ (ದೀಪಗಳ ಸಾಲು) ದೀಪಗಳ ಹಬ್ಬ ಇದನ್ನು ವಿಕ್ರಮಶಕೆಯ ವರ್ಷದ ಕೊನೆಯಲ್ಲಿ ಆಚರಿಸಲಾಗುತ್ತದೆ.ವಿಕ್ರಮಶಕೆ ಉತ್ತರ ಭಾರತದಲ್ಲಿ ಉಪಯೋಗಿಸಲ್ಪಡುವುದರಿಂದ ಅಲ್ಲಿ ದೀಪಾವಳಿ ಹೊಸ ವರ್ಷದ ಹಬ್ಬವೂ ಹೌದು.
ಭಾರತದ ಸಾಂಪ್ರದಾಯಿಕ ಪಂಚಾಂಗಗಳು ಚಂದ್ರಮಾನವನ್ನು ಅವಲಂಬಿಸಿವೆ.ಅಂದರೆ ಆಶ್ವಯುಜಮಾಸ ಕೃಷ್ಣಪಕ್ಷದ ಚತುರ್ದಶಿ,ಅಮಾವಾಸ್ಯೆ ಹಾಗೂ ಕಾರ್ತಿಕ ಮಾಸ ಶುಕ್ಲಪಕ್ಷದ ಪಾಡ್ಯ ಈ ದಿನಗಳಲ್ಲಿ ದೀಪಾವಳಿಯನ್ನು ಆಚರಿಸಲಾಗುತ್ತದೆ.ದೀಪಾವಳಿ ಸಾಮಾನ್ಯವಾಗಿ ಅಕ್ಟೋಬರ್ ಅಥವಾ ನವೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.
ಅಮಾವಾಸ್ಯೆಯ ದಿನ ದೀಪಾವಳಿಯ ಹಬ್ಬದ ಕಾಲದಲ್ಲೇ ಉಂಟಾಗುತ್ತದೆ.ಅಮಾವಾಸ್ಯೆಯ ನಿಖರ ದಿನಾಂಕ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ದಿನಗಳಂದು ಆಗಬಹುದು ಇದರೊಂದಿಗೆ ದೀಪಾವಳಿಯ ದಿನಾಂಕವೂ ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆಯಾಗಬಹುದು.
ಎರಡು ಪೌರಾಣಿಕ ಘಟನೆಗಳು ಮುಖ್ಯವಾಗಿ ದೀಪಾವಳಿಯೊಂದಿಗೆ ಸಂಬಂಧಿತವಾಗಿವೆ
ಶ್ರೀ ರಾಮ ರಾವಣನನ್ನು ಗೆದ್ದು ಸೀತೆ ಮತ್ತು ಲಕ್ಷ್ಮಣರೊಂದಿಗೆ ಅಯೋಧ್ಯೆಗೆ ಮರಳಿದ ಸಮಯವೆಂದು ದೀಪಾವಳಿಯನ್ನು ಕೆಲವರು ಆಚರಿಸುತ್ತಾರೆ
ಅಮಾವಾಸ್ಯೆಯ ಹಿಂದಿನ ದಿನ (ನರಕ ಚತುರ್ದಶಿ) ಶ್ರೀಕೃಷ್ಣ ನರಕಾಸುರನನ್ನು ಸಂಹರಿಸಿದ ದಿನ ಎಂದು ಹೇಳಲಾಗುತ್ತದೆ.ಒಟ್ಟಿನಲ್ಲಿ ದೀಪಾವಳಿಯಲ್ಲಿ ಕೇಡಿನ ಮೇಲೆ ಶುಭದ ವಿಜಯವನ್ನು ಆಚರಿಸಲಾಗುತ್ತದೆ.
ದೀಪಾವಳಿಯೊಂದಿಗೆ ಇನ್ನಿತರ ಪುರಾಣಗಳೂ ಸಂಬಂಧಿತವಾಗಿದೆ.ಉದಾಹರಣೆಗೆ, ಬಲಿ-ವಾಮನರ ಕಥೆ ಮತ್ತು ಬಲಿಯ ತ್ಯಾಗವನ್ನು ಅಮಾವಾಸ್ಯೆಯ ಮರುದಿನ ಬಲಿಪಾಡ್ಯಮಿಯಾಗಿ ಆಚರಿಸಲಾಗುತ್ತದೆ.
ಸಿಕ್ಖ್ ಧರ್ಮದಲ್ಲಿಯೂ ದೀಪಾವಳಿ ಮುಖ್ಯ ಹಬ್ಬ.1620ರಲ್ಲಿ ಸಿಕ್ಖರ ಆರನೆಯ ಗುರು ಹರಗೋಬಿಂದ್ ಸಿಂಗ್ ಗ್ವಾಲಿಯರ್ನ ಕೋಟೆಯಲ್ಲಿ ಬಂಧಿತರಾಗಿದ್ದ 62 ರಾಜರನ್ನು ಬಿಡಿಸಿ ತಂದ ದಿನವೆಂದು ಈ ಕಾಲವನ್ನು ಆಚರಿಸಲಾಗುತ್ತದೆ.
ದೀಪಾವಳಿಯು ಜೈನ ಧರ್ಮದಲ್ಲಿ ಕಡೆಯ ತೀರ್ಥಂಕರ ಮಹಾವೀರರು ಕಾರ್ತಿಕ ಚತಿರ್ದಶಿಯಂದು (ಕ್ರಿ.ಪೂ 527 ಅಕ್ಟೋಬರ್ 16) ಪಾವಾಪುರಿಯಲ್ಲಿ ಮೋಕ್ಷ ಹೊಂದಿದ ದಿನವಾಗಿ ಆಚರಿಸಲ್ಪಡುತ್ತದೆ.
ಕ್ರಿ.ಪೂ 3ನೇ ಶತಮಾನದಲ್ಲಿ ಆಚಾರ್ಯ ಭದ್ರಬಾಹುವಿನಿಂದ ರಚಿತವಾದ ಕಲ್ಪಶ್ರುತ ಗ್ರಂಥದಲ್ಲಿರುವಂತೆ ಮಹಾವೀರರ ನಿರ್ವಾಣ ಕಾಲದಲ್ಲಿದ್ದ ದೇವತೆಗಳಿಂದ ಅಂಧಕಾರವು ಮರೆಯಾಗಿದ್ದಿತು. ಆದರೆ ಮುಂದಿನ ರಾತ್ರಿ ಗಾಡಾಂಧಕಾರವು ಆವರಿಸಿತು. ತಮ್ಮ ಗುರುವಿನ ಜ್ಜಾನಜ್ಯೋತಿಯ ಸಂಕೇತವಾಗಿ 16ಗಣ-ಚರ್ಕವರ್ತಿ, 9 ಮಲ್ಲ ಮತ್ತು 8 ಗಣರಾಜ್ಯದಲ್ಲಿ ದ್ವಾರವನ್ನು ಬೆಳಗಿದರು. ಜೈನರಿಗೆ ಇದು ವರ್ಷದ ಪ್ರಾರಂಭ.
ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪಂಚದ ಎಲ್ಲೆಡೆ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿ ತಿಂಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ.ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಪ್ರಾರಂಭ ಸಹ; ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ.
ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ.ಇದು ದೀಪಗಳಿಂದ ದೀಪಗಳನ್ನು ಹಚ್ಚುವ ಹಬ್ಬ.ಹೊಲ ತೋಟಗಳಲ್ಲಿ ದೀಪದ ಕಂಬವನ್ನು ಆರತಿ ಮಾಡುವುದರ ಮೂಲಕ ಆಚರಿಸುವರು.ಅನೇಕ ಕಡೆಗಳಲ್ಲಿ ದೀಪಾವಳಿಯನ್ನು ಐದು ದಿನಗಳ ಕಾಲ ಆಚರಿಸಲಾಗುತ್ತದೆ.
ದಕ್ಷಿಣ ಭಾರತದಲ್ಲಿ ಸಾಮಾನ್ಯವಾಗಿ ಮೂರು ದಿನಗಳ ಆಚರಣೆ ನಡೆಯುತ್ತದೆ.ದಕ್ಷಿಣ ಭಾರತದಲ್ಲಿ ನರಕ ಚತುರ್ದಶಿ ಪ್ರಮುಖವಾದರೆ,ಉತ್ತರ ಭಾರತದಲ್ಲಿ ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು.ಜೈನ ಧರ್ಮದಲ್ಲಿ ದೀಪಾವಳಿಯನ್ನು ಕಾರ್ತಿಕ ಮಾಸದ 3 ದಿನ ಆಚರಿಸುತ್ತಾರೆ.