Home KUMTA ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

ಶಾಲೆಗೆ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ಶೈಕ್ಷಣಿಕ ಉಪಕರಣ ಕೊಡುಗೆ.

ಕುಮಟಾ : ತಾಲೂಕಿನ ಕರ್ಕಿಮಕ್ಕಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನೊವೊ ನೊರ್ಡಿಸ್ಕ ಕಂಪನಿಯ ಸಿಎಸ್‌ಆರ್ ನಿಧಿಯಿಂದ ಕೊಡುಗೆಯಾಗಿ ನೀಡಿದ ೭ ಲಕ್ಷ ರೂ. ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದ ಉಪಯುಕ್ತ ಶೈಕ್ಷಣಿಕ ಉಪಕರಣಗಳನ್ನು ಹಸ್ತಾಂತರಿಸಲಾಯಿತು. ಇದೇ ವೇಳೆ ಶಾಲೆಯ ಪ್ರಯೋಗಾಲಯ ಹಾಗೂ ವಾಚನಾಲಯವನ್ನು ನೊವೊ ನೊರ್ಡಿಸ್ಕ ಕಂಪನಿಯ ಮೆನೆಜರ್ ಪ್ರಶಾಂತ ಉದ್ಘಾಟಿಸಿ ಶುಭಹಾರೈಸಿದರು.

ಶೈಕ್ಷಣಿಕ ಉಪಕರಣಗಳನ್ನು ಶಾಲೆಯ ಪರವಾಗಿ ಸ್ವೀಕರಿಸಿದ ಬಿಇಒ ರಾಜೇಂದ್ರ ಎಲ್. ಭಟ್ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಶಾಲೆ ಸಾಕಷ್ಟು ಶೈಕ್ಷಣಿಕ ಪ್ರಗತಿಯತ್ತ ಸಾಗುವುದಕ್ಕೆ ಇಲ್ಲಿನ ಶಿಕ್ಷಕ ವರ್ಗ, ಎಸ್‌ಡಿಎಂಸಿ ಪ್ರಯತ್ನದಂತೆಯೇ ಹಳೆಯ ವಿದ್ಯಾರ್ಥಿಗಳ ಸಹಯೋಗವೂ ದೊರೆಯತ್ತಿರುವುದು ಶ್ಲಾಘನೀಯವಾಗಿದೆ. ಮೂರೂರು ಕ್ಲಸ್ಟರಿನ ಗ್ರಾಮೀಣ ಪ್ರದೇಶದಲ್ಲಿರುವ ಕರ್ಕಿಮಕ್ಕಿ ಸರ್ಕಾರಿ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರು ಬೆಂಗಳೂರಿನಲ್ಲಿ ನೊವೊ ನೊರ್ಡಿಸ್ಕ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ತಾವು ಕಲಿತ ಶಾಲೆಯ ಸ್ಮರಣೆಯಿಟ್ಟು ೭ ಲಕ್ಷರೂ.ಗಳಿಗೂ ಹೆಚ್ಚು ಮೌಲ್ಯದ ವಿಜ್ಞಾನ ಹಾಗೂ ಇತರೆ ಶೈಕ್ಷಣಿಕ ಉಪಕರಣಗಳನ್ನು ಶಾಲೆಗೆ ನೀಡಿದ್ದಾರೆ. ಶಾಲೆಗೆ ಈ ಕೊಡುಗೆ ಲಭ್ಯವಾಗುವಲ್ಲಿ ಶಾಲೆಯ ಮುಖ್ಯ ಶಿಕ್ಷಕ ಹರೀಶ ಪಟಗಾರ, ಎಸ್‌ಡಿಎಂಸಿಯ ಅಧ್ಯಕ್ಷ ರಾಮಚಂದ್ರ ಗೌಡ ಪ್ರಯತ್ನ ಗಮನಾರ್ಹವಾಗಿದೆ. ಕರ್ಕಿಮಕ್ಕಿ ಶಾಲೆಗೆ ಬರುವ ಮಕ್ಕಳಲ್ಲಿ ಬಹುತೇಕ ಕುಟುಂಬಗಳು ಬಡ ಹಾಗೂ ಕೂಲಿಕಾರ್ಮಿಕ ಕುಟುಂಬಗಳಾದರೂ ಪಾಲಕರು ಮಕ್ಕಳ ಶಿಕ್ಷಣಕ್ಕಾಗಿ ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಶಾಲೆಯ ಮುಖ್ಯ ಶಿಕ್ಷಕರು ಈಗಾಗಲೇ ಸುಮಾರು ಒಂದೂವರೆ ಲಕ್ಷ ಮೌಲ್ಯದ ಸೋಲಾರ್ ವ್ಯವಸ್ಥೆ ಮತ್ತು ಡಿಜಿಟಲ್ ಟಿವಿಗಳನ್ನು ಒದಗಿಸಿದ್ದಾರೆ. ಇದರಿಂದ ವಿದ್ಯಾರ್ಥಿಗಳಿಗೆ ಡಿಜಿಟಲ್ ಶಿಕ್ಷಣಕ್ಕೂ ಅನುಕೂಲವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿ ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ ಇವರ ಸೇವೆಯನ್ನು ಇಲಾಖೆಯು ಸದಾ ಸ್ಮರಿಸಲಿದೆ ಎಂದರು. 

ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಭಾರತಿ ನಾಯ್ಕ. ಗಣಪತಿ ಮಂಜುನಾಥ ಹೆಗಡೆ ಬಾಳೆಗದ್ದೆ, ಎಸ್‌ಡಿಎಂಸಿ ಅಧ್ಯಕ್ಷ ರಾಮಚಂದ್ರ ಮಾರು ಗೌಡ, ಉಪಾಧ್ಯಕ್ಷೆ ರೇಣುಕಾ ಮಂಜುನಾಥ ನಾಯ್ಕ. ಸಿಆರ್‌ಪಿ ಎಲ್.ಜಿ.ಪಟಗಾರ. ಮುಖ್ಯ ಶಿಕ್ಷಕ ಹರೀಶ ಪಟಗಾರ ಸ್ವಾಗತಿಸಿದರು. ಗಣೇಶ ನಾಯ್ಕ ವಂದಿಸಿದರು. ಮಾಲಿನಿ ಭಟ್ ಮತ್ತು ವಿದ್ಯಾ ಶೆಟ್ಟಿ ನಿರ್ವಹಿಸಿದರು.