ಕಾರವಾರ: ಇಂದಿನ ಯುವಜನತೆ ಆಧುನಿಕ ಉಪಕರಣಗಳತ್ತಲೇ ಹೆಚ್ಚು ಆಕರ್ಷಿತರಾಗುತ್ತಿರುವುದರಿಂದ ಹಿರಿಯ ನಾಗರಿಕರಿಗೆ ಸಾಮಾಜಿಕ ಭದ್ರತೆಯ ಕೊರತೆ ಉಂಟಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಟಿ.ಗೋವಿಂದಯ್ಯ ಅಭಿಪ್ರಾಯಪಟ್ಟರು.

ನಗರದ ಹಿರಿಯ ನಾಗರಿಕರ ಯೋಗಕ್ಷೇಮ ಕೇಂದ್ರದಲ್ಲಿ ಸೋಮವಾರ ಹಿರಿಯ ನಾಗರಿಕರ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಮಧ್ಯಸ್ಥಿಕೆ ಮತ್ತು ಜನತಾ ನ್ಯಾಯಾಲಯಗಳ ಕುರಿತು ಸಂಧಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇತ್ತೀಚಿಗೆ ದೂರದರ್ಶನ, ಕಂಪ್ಯೂಟರ್ ಹಾಗೂ ಮುಖ್ಯವಾಗಿ ಮೊಬೈಲ್ ಗಳ ಹಾವಳಿಯಿಂದಾಗಿ ಎಲ್ಲರೂ ಎದುರು ಬದುರು ಕೂತಿದ್ದರೂ ಸಹ ಮಾತನಾಡದಿರುವ, ಭಾವನೆಗಳನ್ನು ವ್ಯಕ್ತಪಡಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇತ್ತೀಚೆಗೆ ಕೇವಲ ಪತಿ, ಪತ್ನಿ, ಮಗು ಇಷ್ಟು ಸದಸ್ಯರಿದ್ದರೆ ಮಾತ್ರ ಕುಟುಂಬ ಎಂಬಂತಾಗಿದ್ದು ಇನ್ನುಳಿದ ಹಿರಿಯರ ಬಗ್ಗೆ ಯೋಚಿಸುವುದೇ ಇಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಈ ಮೊದಲು ನ್ಯಾಯಾಲಯದಲ್ಲಿ ಒಂದು ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳಲು ವರ್ಷಾನುಗಟ್ಟಲೆ ಕಾಯಬೇಕಿತ್ತು. ಆದರೀಗ ಅದನ್ನು ತಿದ್ದುಪಡಿ ಮಾಡಿ, ಹಿರಿಯ ನಾಗರಿಕರಿಕರ ಪ್ರಕರಣಗಳನ್ನು ವಿಶೇಷ ಮುತುವರ್ಜಿ ವಹಿಸಿ ಶೀಘ್ರ ಪರಿಹಾರ ಮಾಡಲಾಗುತ್ತಿದೆ ಎಂದರು.

RELATED ARTICLES  ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಶುಭಾರಂಭ

ಇತ್ತೀಚಿಗೆ ಕಾರಣಗಳಿಲ್ಲದೇ ವಿಚ್ಛೇದನವನ್ನು ಪಡೆಯುವುದು ಸಾಮಾನ್ಯವಾಗಿದ್ದು ಇದು ಕಳವಳಕಾರಿ ಸಂಗತಿಯಾಗಿದೆ. ಎಲ್ಲರ ಎದುರು ಸಪ್ತಪದಿ ತುಳಿದು, ಪತ್ನಿಗೆ ಎಲ್ಲ ರೀತಿಯ ರಕ್ಷಣೆ ನೀಡುತ್ತೇನೆ ಎಂದು ವಿವಾಹದ ಸಂದರ್ಭದಲ್ಲಿ ವರನು ವಧುವಿಗೆ ಪ್ರಮಾಣ ಮಾಡುತ್ತಾನೆ. ಆದರೆ ಬಳಿಕ ಚಿಕ್ಕ ಚಿಕ್ಕ ಮನಸ್ತಾಪಗಳನ್ನು ಕೂಡ ಬಗೆಹರಿಸಿಕೊಳ್ಳಲಾಗದೆ ನ್ಯಾಯಾಲಯಕ್ಕೆ ವಕೀಲರ ಜತೆ ಬರುತ್ತಾನೆ. ಈಗೀಗಲಂತೂ ಕೆಲವರು ಪ್ರತಿಷ್ಠೆಗಾಗಿಯೇ ನ್ಯಾಯಾಲಯದ ಮೆಟ್ಟಿಲೇರುತ್ತಿದ್ದಾರೆ ಎಂದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉದಯ ನಾಯ್ಕ ಮಾತನಾಡಿ 50 ವರ್ಷ ಮೇಲ್ಪಟ್ಟವರನ್ನು ಹಿರಿಯ ನಾಗರಿಕರು ಎಂದು ಪರಿಗಣಿಸುವ ಮೂಲಕ ಅವರಿಗೆ ಗುರುತಿನ ಚೀಟಿ ನೀಡುವಂತಾಗಬೇಕು. ಸದ್ಯ ಇರುವ 60 ವರ್ಷದ ಮಿತಿಯಿಂದಾಗಿ ಅವರು ಇನ್ನೊಬ್ಬರ ಸಹಾಯ ಪಡೆದು ತಿರುಗಾಡುವ ಪರಿಸ್ಥಿತಿ ಉಂಟಾಗುತ್ತದೆ. ಹೀಗಾಗಿ ಸರಕಾರದಿಂದ ಸಿಗುವ ಎಲ್ಲ ಸೌಲಭ್ಯವನ್ನು ಪಡೆದುಕೊಳ್ಳಲು, ಅದನ್ನು ಅನುಭವಿಸಲು ಹೆಚ್ಚಿನವರಿಗೆ ಸಾಧ್ಯವಾಗುವುದೇ ಇಲ್ಲ. 50 ವರ್ಷಕ್ಕೆ ಹಿರಿಯ ನಾಗರಿಕರು ಎಂದು ಗುರುತಿಸಿಕೊಂಡರೆ ಎಲ್ಲ ಸೌಲಭ್ಯಗಳನ್ನು ಯಾರ ಸಹಾಯವಿಲ್ಲದೆ ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಸ್ಥಳೀಯ ಸಾರಿಗೆ, ಸಂಸ್ಥೆಗಳಲ್ಲಿಯೂ ಇವರಿಗಾಗಿ ರಿಯಾಯಿತಿ, ವಿಶೇಷ ಸೌಲಭ್ಯಗಳು ಸಿಗುವಂತಾಗಬೇಕು ಎಂದರು.

RELATED ARTICLES  ಯಶಸ್ವಿಯಾಯ್ತು ವಿವೇಕ ಉತ್ಸವ: ವಿವೇಕ ನಗರ ವಿಕಾಸ ಸಂಘದ ಸಂಯೋಜನೆಯಲ್ಲಿ ಮೂಡಿಬಂದ ಕಾರ್ಯಕ್ರಮ

ಕಾರ್ಯಕ್ರಮದಲ್ಲಿ ಹಿರಿಯ ನಾಗರಿಕ ಮತ್ತು ವಿಕಲಚೇತನ ಸಬಲೀಕರಣ ಜಿಲ್ಲಾ ಅಧಿಕಾರಿ ಗಂಗಪ್ಪ, ಹಿರಿಯ ವಕೀಲ ಆರ್.ವಿ.ಭಟ್ಟ, ಬೆಳಗಾವಿಯ ಮಲ್ಲಿಕಾರ್ಜುನ ಜನಸೇವಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಖೋತ, ಹಿರಿಯ ನಾಗರಿಕರಾದ ಬಾಬು ಅಂಬಿಗ ಮುಂತಾದವರು ಇದ್ದರು