ನವದೆಹಲಿ: ಮನೆಗಳಲ್ಲಿ ಕೆಲಸ ಮಾಡಿ ಜೀವನ ಸಾಗಿಸುವ ಲಕ್ಷಾಂತರ ಜನರು ಶೀಘ್ರದಲ್ಲಿ ಸಮಾನ ಮತ್ತು ಕನಿಷ್ಠ ವೇತನದ ಹಾಗೂ ಸಾಮಾಜಿಕ ಭದ್ರತೆಯ ಹಕ್ಕನ್ನು ಪಡೆಯಲಿದ್ದಾರೆ.
ಜೊತೆಗೆ, ಕೌಶಲ ಅಭಿವೃದ್ಧಿ ಕಾರ್ಯಕ್ರಮದ ಪ್ರಯೋಜನ ಪಡೆಯುವ ಮತ್ತು ಬೇರೆ ವರ್ಗದ ಕೆಲಸಗಾರರು/ಕಾರ್ಮಿಕರ ರೀತಿಯಲ್ಲಿ ಒಕ್ಕೂಟ ಅಥವಾ ಸಂಘಟನೆ ರಚಿಸುವ ಹಕ್ಕನ್ನೂ ಅವರು ಪಡೆಯಲಿದ್ದಾರೆ.
ಪ್ರಸ್ತುತ ಜಾರಿಯಲ್ಲಿರುವ ಕಾರ್ಮಿಕ ಕಾನೂನಿನ ಅಡಿಯಲ್ಲಿಯೇ ಈ ಎಲ್ಲ ಅನುಕೂಲಗಳು ಅವರಿಗೆ ಸಿಗಲಿವೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಮನೆ ಕೆಲಸಗಾರರಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕರಡು ನೀತಿಯನ್ನು ಸಿದ್ಧಪಡಿಸಿದ್ದು, ಇದೇ ನವೆಂಬರ್ 16ರ ಒಳಗಾಗಿ ಸಂಬಂಧಿಸಿದವರಿಂದ ಮತ್ತು ಜನಸಾಮಾನ್ಯರಿಂದ ಅಭಿಪ್ರಾಯಗಳನ್ನು ಕೇಳಿದೆ.
ಹೊಸ ಕರಡು ನೀತಿಯಲ್ಲಿ ಮನೆ ಕೆಲಸಗಾರರಿಗೆ ಕನಿಷ್ಠ ವೇತನವನ್ನು ನಿಗದಿ ಪಡಿಸಲಾಗಿಲ್ಲ. ಆದರೆ, ಕೆಲವು ವರ್ಷಗಳ ಹಿಂದೆ ರೂಪಿಸಲಾಗಿದ್ದ ಕರಡು ನೀತಿಯು, ಮನೆಗಳಲ್ಲಿ ಸಹಾಯಕರಾಗಿ ಕಾರ್ಯನಿರ್ವಹಿಸುವ ಕೌಶಲಯುಕ್ತ ಕೆಲಸಗಾರರಿಗೆ ಪ್ರತಿ ತಿಂಗಳು ಕನಿಷ್ಠ ₹9,000 ವೇತನ ನೀಡಬೇಕು ಎಂದು ಹೇಳಿತ್ತು. ಮಾತ್ರವಲ್ಲದೇ ಸಾಮಾಜಿಕ ಭದ್ರತೆ, ಕಡ್ಡಾಯ ರಜೆ ಸೇರಿದಂತೆ ಇತರೆ ಸೌಲಭ್ಯಗಳನ್ನು ಅವರಿಗೆ ಒದಗಿಸಬೇಕು ಎಂದೂ ಸೂಚಿಸಿತ್ತು.
ನೀತಿಯಲ್ಲೇನಿದೆ?: ಮನೆ ಕೆಲಸಗಾರರಿಗೆ ಸಾಮಾಜಿಕ ಭದ್ರತೆ ಒದಗಿಸಲು, ಅವರಿಗೆ ನ್ಯಾಯಸಮ್ಮತ ಉದ್ಯೋಗ ಕೊಡಿಸಲು, ಅವರ ಕುಂದು ಕೊರತೆಗಳನ್ನು ಆಲಿಸಲು, ಸಮಸ್ಯೆ ಬಗೆಹರಿಸಲು ಪ್ರತ್ಯೇಕ ಸಂಸ್ಥೆಯನ್ನು ಸ್ಥಾಪಿಸಬೇಕು ಎಂದು ಹೊಸ ಕರಡು ನೀತಿ ಹೇಳುತ್ತದೆ.
ಈ ನೀತಿಯು ಮನೆ ಕೆಲಸಗಾರರನ್ನೂ ಕಾರ್ಮಿಕರು ಎಂದು ಗುರುತಿಸುತ್ತದೆ. ರಾಜ್ಯ ಕಾರ್ಮಿಕ ಇಲಾಖೆ ಅಥವಾ ಇತರೆ ನಿರ್ದಿಷ್ಟ ಸಂಸ್ಥೆಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳುವ ಹಕ್ಕನ್ನು ಅವರಿಗೆ ನೀಡುತ್ತದೆ.
ಕಾನೂನಿನ ಅಡಿಯಲ್ಲಿ ಬೇರೆ ವರ್ಗದ ಕಾರ್ಮಿಕರಿಗೆ ಲಭ್ಯವಿರುವ ಕನಿಷ್ಠ ವೇತನ, ಸಮಾನ ಭತ್ಯೆಯ ಹಕ್ಕುಗಳನ್ನು ಮನೆ ಕೆಲಸಗಾರರಿಗೂ ನೀಡುವುದಕ್ಕಾಗಿ ಈಗಿರುವ ಕಾಯ್ದೆ, ನೀತಿಗಳು ಮತ್ತು ಯೋಜನೆಗಳನ್ನು ವಿಸ್ತರಿಸಲೂ ಕರಡು ನೀತಿ ಅವಕಾಶ ಕಲ್ಪಿಸುತ್ತದೆ.
ತಮ್ಮದೇ ಆದ ಒಕ್ಕೂಟ ಅಥವಾ ಸಂಘಟನೆ ಹುಟ್ಟುಹಾಕುವ ಇಲ್ಲವೇ ಇತರ ಒಕ್ಕೂಟಗಳು ಅಥವಾ ಸಂಘಟನೆಗಳೊಂದಿಗೆ ಸೇರಿಕೊಳ್ಳುವ ಹಕ್ಕನ್ನೂ ಮನೆ ಸಹಾಯಕರಿಗೆ ಈ ನೀತಿ ನೀಡಲಿದೆ. ಕೆಲಸದ ಮತ್ತು ವಿಶ್ರಾಂತಿ ಅವಧಿಯನ್ನು ನಿಗದಿಪಡಿಸಿ ಮಾದರಿ ಉದ್ಯೋಗ ಒಪ್ಪಂದ ಮಾಡಿಕೊಳ್ಳಲೂ ಇದರಲ್ಲಿ ಅವಕಾಶ ಇದೆ.
ನಿಯಂತ್ರಣ: ನೇಮಕಾತಿ ಮಾಡುವ ಮತ್ತು ಕೆಲಸ ನೀಡುವ ಏಜೆನ್ಸಿಗಳನ್ನು ನಿಯಂತ್ರಿಸುವ ಗುರಿಯನ್ನೂ ಕರಡು ನೀತಿ ಹೊಂದಿದೆ. ಇಂತಹ ಏಜೆನ್ಸಿಗಳನ್ನು ನಿಯಂತ್ರಿಸುವುದಕ್ಕಾಗಿ ಆಯಾ ರಾಜ್ಯ ಸರ್ಕಾರಗಳು ಪ್ರತ್ಯೇಕ ನೀತಿ ರೂಪಿಸಬೇಕು ಎಂದು ಹೊಸ ನೀತಿ ಹೇಳುತ್ತದೆ. ಅರೆಕಾಲಿಕ ಮತ್ತು ಪೂರ್ಣ ಕಾಲಿಕ ಕೆಲಸಗಾರರು, ಮನೆಯಲ್ಲೇ ಉಳಿದುಕೊಂಡು ಕೆಲಸ ಮಾಡುವವರು, ಉದ್ಯೋಗದಾತರು, ಖಾಸಗಿ ನೇಮಕಾತಿ ಏಜೆನ್ಸಿಗಳು… ಮುಂತಾದವುಗಳಿಗೆ ಕರಡು ನೀತಿಯಲ್ಲಿ ಸ್ಪಷ್ಟ ವ್ಯಾಖ್ಯಾನ ನೀಡಲಾಗಿದೆ.
ಮೂರು ಸಮಿತಿ: ನೀತಿಯ ಅನುಷ್ಠಾನಕ್ಕೆ ಕೇಂದ್ರ, ರಾಜ್ಯ ಮತ್ತು ಜಿಲ್ಲಾ ಮಟ್ಟಗಳಲ್ಲಿ 3 ಸಮಿತಿಗಳು ಕಾರ್ಯನಿರ್ವಹಿಸಲಿವೆ.