ಶಿರಸಿ : ನಗರದ ದೇವಿಕರೆ ಬಳಿ ಹೃದಯಾಘಾತದಿಂದ ಬೈಕ್ ನಿಂದ ಕುಸಿದು ಬಿದ್ದು ವ್ಯಕ್ತಿ ಓರ್ವ ಮೃತಪಟ್ಟಿರುವ ಘಟನೆ ನಡೆದಿದೆ. ಎದೆ ನೋವು ಕಾಣಿಸಿಕೊಂಡ ಕಾರಣ ತಾಯಿಯೊಂದಿಗೆ ಆಸ್ಪತ್ರೆಗೆ ತೆರಳಿ ವೈದ್ಯರಿಂದ ಸಲಹೆ ಪಡೆದು ಬೈಕ್ ಮೇಲೆ ಮನೆಗೆ ವಾಪಸ್ ಆಗುತ್ತಿದ್ದ ವೇಳೆ ಹೃದಯಾಘಾತ ಉಂಟಾಗಿ ವ್ಯಕ್ತಿ ಕೊನೆಯುಸಿರೆಳೆದಿದ್ದಾರೆ.
ಹನುಮಂತಿಯ ನಿವಾಸಿಯಾಗಿದ್ದ ಪ್ರೇಮಾನಂದ ಗಂಗಾಧರ ತಳಗೇರಿ (25) ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಮಧ್ಯಾಹ್ನದ ಸಮಯದಲ್ಲಿ ಎದೆ ನೋವು ಕಾಣಿಸಿಕೊಂಡಿದೆ ಎನ್ನಲಾಗಿದೆ.ಬಳಿಕ ಆತ ತಾಯಿ ಬಳಿ ವಿಚಾರವನ್ನ ಹೇಳಿ ಆಸ್ಪತ್ರೆಗೆ ಹೋಗಲು ಹೋರಟಿದ್ದು, ಈ ವೇಳೆ ಮಗನಿಗೆ ಎದೆ ನೋವು ಇರುವ ಕಾರಣ ತಾಯಿ ನಾನು ಸಹ ಜೊತೆಯಲ್ಲೆ ಬರುವುದಾಗಿ ಮಗನಿಗೆ ಹೇಳಿದ್ದಳು ಎನ್ನಲಾಗಿದ್ದು, ಹೀಗಾಗಿ ಆತ ತಾಯಿಯನ್ನು ಸಹ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾನೆ.
ಬಳಿಕ ವೈದ್ಯರನ್ನ ಭೇಟಿ ಯಾದ ಪ್ರೇಮಾನಂದ ಬೈಕ್‌ನಲ್ಲಿ ವಾಪಸ್ ಮನೆಗೆ ಬರುವಾಗ ಏಕಾಏಕಿಯಾಗಿ ಬೈಕ್ ನಿಯಂತ್ರಣ ತಪ್ಪಿ ಬಿದ್ದು ಮೃತಪಟ್ಟಿದ್ದಾನೆ.ಇನ್ನೂ ಬೈಕ್ ಹಿಂಬದಿಯಲ್ಲಿದ್ದ ಆತನ ತಾಯಿಗೂ ಸಹ ಗಾಯವಾಗಿದ್ದು, ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಹೆಚ್ಚಿನ ಸ್ಪಷ್ಟ ಮಾಹಿತಿ ತನಿಖೆ ನಂತರ ತಿಳಿದು ಬರಬೇಕಿದೆ.