ಶಿರಸಿ: ಜಿಲ್ಲೆಯ 30 ಪೊಲೀಸ್ ಠಾಣೆಗಳಲ್ಲಿ ಶಿರಸಿ ನಗರ ಠಾಣೆಯನ್ನು ಮಾದರಿ ಪೊಲೀಸ್ ಠಾಣೆಯಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ ಆಯ್ಕೆ ಮಾಡಿದ್ದಾರೆ.

ಠಾಣೆಯಲ್ಲಿನ ಕಡತಗಳು ಹಾಗೂ ದಸ್ತಾವೇಜುಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಬರುವುದು ಹಾಗೂ ಠಾಣೆಯ ಒಳ ಆವರಣವನ್ನು ಹೈಟೆಕ್ ಆಗಿ ನಿರ್ವಹಿಸುವುದು ಬಂದಂತಹ ಸಾರ್ವಜನಿಕರಿಗೆ ಜನಸ್ನೇಹಿಯಾಗಿ ವ್ಯವಹರಿಸುವುದು ಸೇರಿದಂತೆ ಹಲವು ನಿಬಂಧನೆಗಳನ್ನು ಹೇರಿ ಉತ್ತರ ಕನ್ನಡ ಜಿಲ್ಲೆಯ ಮಾದರಿ ಪೊಲೀಸ್ ಠಾಣೆಯಾಗಿ ಶಿರಸಿ ನಗರ ಪೊಲೀಸ್ ಠಾಣೆಯನ್ನು ಆಯ್ಕೆ ಮಾಡಲಾಗಿದೆ.

ಈಗಾಗಲೇ ನಗರ ಠಾಣೆಗೆ ಹೈಟೆಕ್ ಸ್ಪರ್ಶ ನೀಡಲಾಗುತ್ತಿದ್ದು, ಪಿಎಸ್‌ಐ ನಾಗಪ್ಪ ಬಿ. ಮುತುವರ್ಜಿ ವಹಿಸಿ ಠಾಣೆಯ ಸೌಂದರ್ಯವನ್ನು ಹಾಗೂ ಸೌಲಭ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸಾರ್ವಜನಿಕರಿಗೆ ನೀಡಲು ಕ್ರಮ ಕೈಗೊಂಡಿದ್ದಾರೆ. ಠಾಣೆಯ ಒಳ ಆವರಣದ ಪರಿವರ್ತನೆ ಕಾರ್ಯ ಭರದಿಂದ ಸಾಗಿದೆ.