ಕಾರವಾರ: ‘ನಗರದ ಕೋಡಿಬಾಗದ ಶ್ರೀಕ್ಷೇತ್ರ ಸಾಯಿಕಟ್ಟಾ ಸಾಯಿ ಮಂದಿರದ 50ನೇ ವರ್ಷದ ಸುವರ್ಣ ಮಹೋತ್ಸವದ ಅಂಗವಾಗಿ 100 ಮಂದಿಗೆ ಸನ್ಮಾನ, ಲೋಕ ಕಲ್ಯಾಣಾರ್ಥವಾಗಿ ಹೋಮ– ಹವನ ಸೇರಿದಂತೆ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳು ಇದೇ 20ರಿಂದ 22ರವರೆಗೆ ನಡೆಯಲಿವೆ’ ಎಂದು ಶ್ರೀಕ್ಷೇತ್ರ ಸಾಯಿಕಟ್ಟಾ ಸಾಯಿ ಮಂದಿರದ ವ್ಯವಸ್ಥಾಪಕ ಶಿವಾನಂದ ಮೇತ್ರಿ ಹೇಳಿದರು.
ನಗರದಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘50 ವರ್ಷದ ಹಿಂದೆ ಶ್ರೀಸತ್ಯ ಸಾಯಿ ಬಾಬಾರವರು ಇಲ್ಲಿ ಶಿರಡಿ ಸಾಯಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದರು. ವಿಶ್ವದಲ್ಲಿ ಅವರೇ ಖುದ್ದಾಗಿ ಸ್ಥಾಪಿಸಿದ ಮೂರನೇ ಮೂರ್ತಿ ಇದು. 50ನೇ ವರ್ಷದ ಸಂಭ್ರಮಾಚರಣೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಈಗಾಗಲೇ ಶ್ರೀಸಾಯಿಕಟ್ಟಾ ಸುವರ್ಣ ಮಹೋತ್ಸವ ಸಮಿತಿಯನ್ನು ಸ್ಥಾಪಿಸಿ, ಅದಕ್ಕೆ ನಗರಸಭೆಯ ಸದಸ್ಯ ದೇವಿದಾಸ ನಾಯ್ಕರನ್ನು ಅಧ್ಯಕ್ಷರನ್ನಾಗಿ ಮಾಡಲಾಗಿದೆ.
ಅವರ ನೇತೃತ್ವದಲ್ಲಿ, ಶ್ರೀಸಾಯಿಕಟ್ಟಾ ಸಾಯಿ ಭಕ್ತ ಭಜನಾ ಮಂಡಳಿಯ ಸಹಯೋಗದೊಂದಿಗೆ ವೇ.ಶಾ.ಸಂ.ಗಾಯತ್ರಿ ಭಟ್ಟರ ಪೌರೋಹಿತ್ಯದಲ್ಲಿ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ’ ಎಂದರು.
ಕಾರ್ಯಕ್ರಮಗಳ ವಿವರ: ‘ಇದೇ 20ರ ಬೆಳಿಗ್ಗೆ 10ರಿಂದ ಸ್ನಾನಶುದ್ಧಿ, ಶರೀರ ಶುದ್ಧಿ, ಧ್ವಜಾರೋಹಣದೊಂದಿಗೆ ಆರಂಭವಾಗಿ, ಸಂಜೆ 5.30ಕ್ಕೆ ಶ್ರೀರಾಮಕೃಷ್ಣಾಶ್ರಮದ ಶ್ರೀಭವೇಶಾನಂದ ಸ್ವಾಮೀಜಿಯವರಿಂದ ಸುವರ್ಣ ಮಹೋತ್ಸವದ ಉದ್ಘಾಟನಾ ಕಾರ್ಯ ನೆರವೇರಲಿದೆ. 21ರಂದು ಕಾಜುಬಾಗದ ಮಾರುತಿ ದೇವಸ್ಥಾನದಿಂದ ಶ್ರೀಕ್ಷೇತ್ರ ಸಾಯಿಕಟ್ಟಾದವರೆಗೆ ಬೆಳಿಗ್ಗೆ 9ರಿಂದ ಶೋಭಾ ಯಾತ್ರೆ ಹೊರಡಲಿದೆ.
ಬಳಿಕ ಸಂಜೆ 5.30ಕ್ಕೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ವಿಠ್ಠಲ ಧಾರವಾಡಕರ್ ಅವರಿಂದ ಸಭಾ ಕಾರ್ಯಕ್ರಮದ ಉದ್ಘಾಟನೆ ನೆರವೇರಲಿದೆ. ಮುಖ್ಯ ಅತಿಥಿಯಾಗಿ ಕರಾವಳಿ ಮುಂಜಾವು ದಿನಪತ್ರಿಕೆಯ ವ್ಯವಸ್ಥಾಪಕ ಸಂಪಾದಕ ಗಂಗಾಧರ ಹಿರೇಗುತ್ತಿ, ಅನಂತ ರಾಯ್ಕರ ಭಾಗವಹಿಸಲಿದ್ದು, ಮೈಸೂರಿನ ನಿವೃತ್ತ ಪ್ರಾಂಶುಪಾಲ ಮಂಜುನಾಥ ಎಂ.ಕೆ ಅವರಿಂದ ವಿಶೇಷ ಉಪನ್ಯಾಸ ನಡೆಯಲಿದೆ. ರಾತ್ರಿ 8.30ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿದೆ’ ಎಂದು ತಿಳಿಸಿದರು.
‘ಇದೇ 22ರಂದು ಬೆಳಿಗ್ಗೆ 7.15ರಿಂದ ವಾರ್ಷಿಕ ಪ್ರತಿಷ್ಠಾಪನಾ ಮಹೋತ್ಸವ ಪೂಜೆ, 9ರಿಂದ ಶ್ರೀಸಾಯಿ ಬಾಬಾ ಪೂರ್ಣಾನುಗ್ರಹ ಪ್ರಾಪ್ತಿಗಾಗಿ ಹಾಗೂ ವಿಶ್ವ ಕಲ್ಯಾಣಕ್ಕಾಗಿ ಶ್ರೀಸಾಯಿ ಗಾಯತ್ರಿ ಮಹಾಯಾಗದ ಪೂರ್ಣಾಹುತಿ, ಸಂಜೆ 4ಕ್ಕೆ ಸ್ಮರಣ ಸಂಚಿಕೆ ಬಿಡುಗಡೆ, ಉಪನ್ಯಾಸ, ರಾತ್ರಿ 9ರಿಂದ ದೀಪಕ ದೇಸಾಯಿ ರಚಿತ ‘ಯೋಗಿಯಾಂಚಾ ರಾಜಾ ಸಾಯೀಶ್ವರ’ ಎಂಬ ಮರಾಠಿ ನಾಟಕವು ಶ್ರೀಸಿದ್ಧಿವಿನಾಯಕ ಬ್ರಹ್ಮದೇವ ಮಹಾಸತಿ ನಾಟ್ಯ ಮಂಡಳಿಯ ಕಲಾವಿದರಿಂದ ಜರುಗಲಿದೆ’ ಎಂದು ತಿಳಿಸಿದರು.
ಶ್ರೀಸಾಯಿಕಟ್ಟಾ ಸುವರ್ಣ ಮಹೋತ್ಸವ ಸಮಿತಿಯ ಅಧ್ಯಕ್ಷ ದೇವಿದಾಸ ನಾಯ್ಕ ಮಾತನಾಡಿ, ‘ಇದೇ 21 ಮತ್ತು 22ರ ಮಧ್ಯಾಹ್ನ 12ರಿಂದ 3ರವರೆಗೆ ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ. 22ರ ಸಂಜೆ 4ರಿಂದ ಸತ್ಸಂಗ ಕಾರ್ಯಕ್ರಮ ನಡೆಯಲಿದ್ದು, ಶ್ರೀಸತ್ಯಸಾಯಿ ಲೋಕಸೇವಾ ಸಮೂಹ ವಿದ್ಯಾ ಸಂಸ್ಥೆಯ ಮಾರ್ಗದರ್ಶಕ ಬಿ.ಎನ್. ನರಸಿಂಹಮೂರ್ತಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀಸತ್ಯಸಾಯಿ ಲೋಕಸೇವಾ ಟೃಸ್ಟ್‌ನ ಟ್ರಸ್ಟಿ ಕೆ.ಸಂಜೀವ ಶೆಟ್ಟಿ ಉಪನ್ಯಾಸ ನೀಡಲಿದ್ದಾರೆ. ಈ ಎಲ್ಲ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಸಹಕರಿಸಬೇಕು’ ಎಂದು ವಿನಂತಿಸಿಕೊಂಡರು. ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ, ಕಿಶೋರ ನಾಯ್ಕ, ಸಾಯಿನಾಥ ಮೇತ್ರಿ, ರಮೇಶ ಬಿಣಗೇಕರ್, ಸಂತೋಷ ಶೇಟ್ ಉಪಸ್ಥಿತರಿದ್ದರು.