ಕುಮಟಾ :- ‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ವತಿಯಿಂದ ನವದೆಹಲಿಯಲ್ಲಿ ಫೆಬ್ರುವರಿ 20 ರಿಂದ 23 ರವರೆಗೆ ನಡೆದ 15ನೇ ‘ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್’ ಅಂತರಾಷ್ಟ್ರೀಯ ಸಮ್ಮೇಳನದಲ್ಲಿ ಭಾರತವನ್ನು ಪ್ರತಿನಿಧಿಸಿದ ಡಾ. ಸುಮಂತ್ ಬಳಗಂಡಿ, ತಮ್ಮ ವಿಶಿಷ್ಟ ಸಂಶೋಧನಾತ್ಮಕ ಪ್ರಬಂಧವನ್ನು ಮಂಡಿಸಿ, ಪ್ರಥಮ ಸ್ಥಾನ ಗಳಿಸಿದ್ದಾರೆ.
“ಎಪಿಲೆಪ್ಸಿ (ಅಪಸ್ಮಾರ/ಮೂರ್ಛೆರೋಗ)
ಹೊಂದಿರುವ ಪುರುಷರಲ್ಲಿ ಲೈಂಗಿಕ ಆರೋಗ್ಯ” ಎಂಬ ಮಹತ್ವದ ವಿಷಯದ ಕುರಿತು ಮಂಡಿಸಿದ ಅವರ ಪ್ರಬಂಧವು ಜಾಗತಿಕ ತಜ್ಞರ ಮೆಚ್ಚುಗೆ ಪಡೆಯುವಂತಾಗಿದ್ದು, ಜಪಾನ್ ಮತ್ತು ಆಸ್ಟ್ರೇಲಿಯಾ ಪ್ರತಿನಿಧಿಗಳು ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನ ಪಡೆದಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರದ ‘ಭಾಗವತ್ ಆಸ್ಪತ್ರೆ’ಯಲ್ಲಿ ಮೆದುಳು ಮತ್ತು ನರರೋಗ ತಜ್ಞರಾಗಿ ಸೇವೆ ಸಲ್ಲಿಸುತ್ತಿರುವ ಡಾ. ಸುಮಂತ್ ಬಳಗಂಡಿ, ತಮ್ಮ ಈ ಮಹತ್ವದ ಸಾಧನೆಯ ಮೂಲಕ ದೇಶದ ಜತೆಗೆ ಕನ್ನಡಿಗರ ಹೆಮ್ಮೆ ಹೆಚ್ಚಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಕುಮಟಾ ನಿವಾಸಿಗಳಾಗಿರುವ ಸ್ವಾತಿ ಮತ್ತು ಜಯದೇವ ಬಳಗಂಡಿ ದಂಪತಿಯ ಸುಪುತ್ರರಾಗಿರುವ ಇವರು, ತಮ್ಮ ನಿರಂತರ ಪರಿಶ್ರಮ ಹಾಗೂ ಕಠಿಣ ಅಧ್ಯಯನದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿದ್ದಾರೆ.
‘ಇಂಟರ್ ನ್ಯಾಶನಲ್ ಲೀಗ್ ಅಗೇನಸ್ಟ್ ಎಪಿಲೆಪ್ಸಿ’ ಒಂದು ಜಾಗತಿಕ ಸಂಸ್ಥೆಯಾಗಿದ್ದು , ವಿಶ್ವ ಆರೋಗ್ಯ ಸಂಸ್ಥೆ (W.H.O.) ಜೊತೆಗೂಡಿ ಎಪಿಲೆಪ್ಸಿ ಕುರಿತು ಸಂಶೋಧನೆ,ಉತ್ತಮ ಚಿಕಿತ್ಸಾ ವಿಧಾನಗಳ ಅಭಿವೃದ್ಧಿ ಮತ್ತು ಜಾಗೃತಿಯನ್ನು ವೃದ್ಧಿಸುವ ಉದ್ದೇಶ ಹೊಂದಿದ್ದು,’ಏಷಿಯನ್ ಆ್ಯಂಡ್ ಓಷಿಯನ್ ಎಪಿಲೆಪ್ಸಿ ಕಾಂಗ್ರೆಸ್ ’ ಸಂಸ್ಥೆಯು ಏಷ್ಯಾ ಹಾಗೂ ಓಶಿಯಾನಿಯಾ ಪ್ರದೇಶಗಳ ದೇಶಗಳಾದ ಭಾರತ, ಚೀನಾ, ಜಪಾನ್, ಆಸ್ಟ್ರೇಲಿಯಾ, ಮಲೇಷಿಯಾ, ದಕ್ಷಿಣ ಕೊರಿಯಾ ಮುಂತಾದ ರಾಷ್ಟ್ರಗಳಲ್ಲಿ ಎಪಿಲೆಪ್ಸಿ ಕುರಿತ ಸಂಶೋಧನೆ, ತಜ್ಞರ ತರಬೇತಿ ಹಾಗೂ ಆರೋಗ್ಯ ಸೇವಾ ಸುಧಾರಣೆಗೆ ಮೀಸಲಾಗಿರುವ ಪ್ರಮುಖ ವೇದಿಕೆಯಾಗಿದೆ. ಈ ಮಹತ್ವದ ಸಮ್ಮೇಳನವು ಈ ಬಾರಿ ಭಾರತದಲ್ಲಿ ಜರುಗಿದ್ದು ಹಲವು ದೇಶಗಳ ಎಪಿಲೆಪ್ಸಿ ತಜ್ಞ ವೈದ್ಯರುಗಳು ಭಾಗವಹಿಸಿದ್ದರು.
ಡಾ.ಸುಮಂತ್ ಬಳಗಂಡಿ ಅವರ ಈ ಸಂಶೋಧನಾತ್ಮಕ ಪ್ರಬಂಧವು ಭಾರತೀಯ ವೈದ್ಯಕೀಯ ಸಂಶೋಧನೆಗೆ ಮಹತ್ತರ ಕೊಡುಗೆ ನೀಡಿದಂತಾಗಿದೆ.