ಕುಮಟಾ : ತಾಲೂಕಿನ ಮೂರೂರಿನ ಹೊಸಾಡಿನಲ್ಲಿರುವ ಅಮೃತಧಾರಾ ಗೋ ಶಾಲೆಯ ಆವಾರದಲ್ಲಿ ಫೇ. ೨೭ ರಿಂದ ಮಾ.೨ ರವರೆಗೆ “ಆಲೆಮನೆ ಹಬ್ಬ” ಹಮ್ಮಿಕೊಳ್ಳಲಾಗಿದೆ ಎಂದು ಗೋಶಾಲೆ ಸಮಿತಿ ಹಾಗೂ ಗೋ ಸಂಧ್ಯಾ ಸಮಿತಿಯವರು ಜಂಟಿ ಪ್ರಕಟಣೆ ನೀಡಿದ್ದಾರೆ.
ಈ ದಿನಗಳಲ್ಲಿ ಸಾಂಪ್ರದಾಯಿಕ ಆಲೆಮನೆ ಹಬ್ಬ, ಕಬ್ಬಿನ ಹಾಲಿನ ವಿವಿಧೋತ್ಪನ್ನ ಮಾರಾಟ ಗೋಗ್ರಾಸ ಸೇವೆ, ಗವ್ಯೋತ್ಪನ್ನ ಮಾರಾಟ, ಗೋ ಸಂತರ್ಪಣೆ, ವಾರ್ಷಿಕ ಸಭೆ, ಗೋಸಂಧ್ಯಾ, ಗೋಪಾಲ ಗೌರವ, ದೇಶೀ ಗೋತಳಿ ವೈಭವ, ಗೋ ಪೂಜೆ, ಗೋ ದಾನ, ಪ್ರತೀ ದಿನ ಕಾಮಧೇನು ಯಾಗ, ವಿಶೇಷವಾಗಿ ಈ ವರ್ಷ ಗೋಆರತಿ ಎಂಬ ವಿಶಿಷ್ಟ ಕಾರ್ಯಕ್ರಮ. ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಫೇ. ೨೭ ರಂದು ಗೋ ಪ್ರೇಮಿ ಮಾತೆಯರ ದಿನ, 28 ರಂದು ಗೋ ಪ್ರೇಮಿ ಮಕ್ಕಳ ದಿನ, ಮಾ. 01 ರಂದು ಭಾರತೀಯ ಗೋ ಬ್ಯಾಂಕ್ ವಾಟ್ಸಾಪ್ ಬಳಗದ ದಿನ, 02 ರಂದು ಗೋ ಪ್ರೇಮಿ ಹಿರಿಯ ನಾಗರಿಕರ ದಿನ ನಡೆಯಲಿದ್ದು ಡಾ. ಡಿ.ಪಿ. ರಮೇಶ್ ಅವರ ಉಪಸ್ಥಿತಿಯಲ್ಲಿ ‘ವಿಶೇಷ ಪಂಚಗವ್ಯ ಚಿಕಿತ್ಸಾ ಶಿಬಿರ’ಮತ್ತು ಅವರಿಂದ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
ಗೋ ಸಂಧ್ಯಾ ಕಾರ್ಯಕ್ರಮ
ಮಾ.೧ ರ ಶನಿವಾರ “ಗೋ ಸಂಧ್ಯಾ” ಕಾರ್ಯಕ್ರಮ ಆಯೋಜಿಸಲಾಗಿದೆ. ಕುಮಟಾ- ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ದಿನಕರ ಕೆ. ಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಮ್. ನಾರಾಯಣ, ಹೊನ್ನಾವರ ಉಪ ಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ್ ಸಿ.ಕೆ., ಮೈಸೂರು ಡೆವಲಪ್‌ಮೆಂಟ್ ಸೆಂಟರ್ ನ ಪ್ರಮುಖ ವಿನಾಯಕ ಪಿ. ಹೆಗಡೆ, ನಿವೃತ್ತ ವಿಜ್ಞಾನಿ ಪ್ರಭಾಕರ ಜೆ. ಭಟ್ಟ, ಜಿ.ಪಂ ಮಾಜಿ ಸದಸ್ಯ ಪ್ರದೀಪ ನಾಯಕ ಉಪಸ್ಥಿತಿಯಲ್ಲಿ ಸಭಾ ಕಾರ್ಯಕ್ರಮ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಕಾಮಧೇನು ಪ್ರಸಾದ ಭೋಜನ ನಡೆಯಲಿದೆ.
ಗೋವಿನ ಉಳಿವಿನ ಹೊಸ ಪರಿಕಲ್ಪನೆಯೊಂದಿಗೆ ಈ ಕಾರ್ಯಕ್ರಮ ಸಂಯೋಜನೆಗೊಂಡಿದ್ದು ನಾಲ್ಕು ದಿನಗಳ ಕಾಲ ಈ ಆಲೆಮನೆ ಹಬ್ಬ ನಡೆಯಲಿದೆ. ಪ್ರತಿದಿನ ಮಧ್ಯಾಹ್ನ 4 ಗಂಟೆಯಿಂದ ಆಲೆಮನೆ ಹಬ್ಬ ಪ್ರಾರಂಭವಾಗುತ್ತಿದ್ದು ಸಂಜೆ 5:30 ಗಂಟೆಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ.
ಒಂದೇ ವೇದಿಕೆಯಲ್ಲಿ ಎರಡು ಕಬ್ಬಿನಗಾಣದ ಮಧ್ಯೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಇದರೊಂದಿಗೆ ಕೃಷಿ ಸಹಾಯಕ ಉಪಕರಣಗಳು ಮಾರಾಟ, ಗವ್ಯೋತ್ಪನ್ನಗಳ ಮಾರಾಟ, ಕರಕುಶಲ ಉತ್ಪನ್ನಗಳ ಮಾರಾಟ, ಕಬ್ಬಿನ ಹಾಲಿನ ಮಾರಾಟ, ಬಹು ಜನರ ಬೇಡಿಕೆಯ ತೊಡಾದೇವು, ಬೆಲ್ಲದ ಬಾಳೆದಿಂಡು, ಪಪ್ಪಾಯಿ ಬಾಳೆದಿಂಡು, ಬೆಲ್ಲ , ಕಬ್ಬಿನ ಹಾಲಿನ ಉತ್ಪನ್ನಗಳ ಮಾರಾಟ ನಡೆಯಲಿದೆ.
ಯಾವುದೇ ನಿರ್ದಿಷ್ಟ ಆದಾಯವಿಲ್ಲದೇ ಅಂದಾಜು 300 ಗೋವುಗಳನ್ನು ಸಂರಕ್ಷಿಸುತ್ತಿರುವ ಅಮೃತಧಾರ ಗೋಶಾಲೆ ಹೊಸಾಡು ಅನಾಥ, ಅಪಘಾತಕ್ಕೀಡಾದ, ಕಸಾಯಿಖಾನೆಯಿಂದ ರಕ್ಷಿಸಲ್ಪಟ್ಟ, ವಯಸ್ಸಾದ ಗೋವುಗಳ ಪಾಲನೆ ಜೊತೆಯಲ್ಲಿ ಭಾರತೀಯ ಗೋ ತಳಿ ಸಂರಕ್ಷಣೆಯನ್ನು ಮಾಡುತ್ತಿದ್ದು ಆಲೆಮನೆ ಹಬ್ಬದ ಸಂಪೂರ್ಣ ಆದಾಯವನ್ನು ಗೋವಿನ ನಿರ್ವಹಣೆಗೆ ವಿನಿಯೋಗಿಸುವ ವಿನೂತನ ಯೋಜನೆ ಇದಾಗಿದೆ. ಇದರ ಜೊತೆಯಲ್ಲಿ ಆಧುನಿಕ ಭರಾಟೆಗೆ ಪಾರಂಪರಿಕ ಸಂಸ್ಕೃತಿ ನಶಿಸುತ್ತಿದ್ದು ಎಲ್ಲಾ ಗೋಪ್ರೇಮಿಗಳನ್ನು ಒಂದೆಡೆ ಸೇರಿಸಿ ಮುಂದಿನ ಪೀಳಿಗೆಗೆ ಗೋ ಸಂರಕ್ಷಣೆಯ ಜಾಗೃತಿ ಪಡಿಸುವ, ಪ್ರಾಚೀನ ಪರಂಪರೆಯನ್ನು ನೆನಪಿಸುವ, ಗೋವಿಗೆ ಸಂತರ್ಪಣೆಗೈಯುವ ಸದಾವಕಾಶ ಕಲ್ಪಿಸುವುದು ಇದರ ಉದ್ದೇಶವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.