ಹೊನ್ನಾವರ: ಸದ್ದಿಲ್ಲದೆ ಸಂವಿಧಾನವನ್ನು ಬದಲಿಸಲು ಪ್ರಯತ್ನಿಸುತ್ತಿರುವ ಹಿನ್ನೆಲೆಯಲ್ಲಿ ವಿಚಾರವಂತಿಕೆಯನ್ನು ರಕ್ಷಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದು ಹಿರಿಯ ಪತ್ರಕರ್ತರಾದ ಜಿ ಯು ಭಟ್ ಅವರು ಅಭಿಪ್ರಾಯಪಟ್ಟರು.
ಚಿಂತನ ಉತ್ತರಕನ್ನಡ, ಚಿಂತನ ರಂಗ ಅಧ್ಯಯನ ಕೇಂದ್ರ ಹಾಗೂ ಪ್ರೀತಿಪದ ಹೊನ್ನಾವರದಲ್ಲಿ ಇಂದು ಹಮ್ಮಿಕೊಂಡಿದ್ದ, ಬಹುರೂಪಿಯ ಪ್ರಕಟಣೆ, ರಂಗಕರ್ಮಿ ಕಿರಣ ಭಟ್ ಅವರ ಹೌಸ್ ಫುಲ್ ರಂಗಕೃತಿ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಂಗಭೂಮಿ ಸದಾ ಜೀವಂತವಾದದ್ದು. ಚಲನಶೀಲತೆಯನ್ನು ಉಳ್ಳದ್ದು. ಈ ರಂಗಭೂಮಿ ಜನರ ಮನಸ್ಸಿನ ಕನ್ನಡಿ. ಹಾಗಾಗಿಯೇ ರಂಗಭೂಮಿ ಬದಲಾವಣೆಯನ್ನು ಪ್ರೇರೇಪಿಸುತ್ತದೆ.
ಕಿರಣ್ ಭಟ್ ಅವರ ಹೌಸ್ ಫುಲ್ ಕೃತಿ ಬಿ ವಿ ಕಾರಂತರ ನಂತರ ನಡೆಯುತ್ತಿರುವ ಹವ್ಯಾಸಿ ರಂಗಭೂಮಿಯ ಚಟುವಟಿಕೆಗಳನ್ನು ಹಿಡಿದಿಟ್ಟಿದೆ. ರಂಗ ಕೈರಳಿ ಕೃತಿಯ ಮೂಲಕ ಓದುಗರ ಮನ ಗೆದ್ದ ಕಿರಣ್ ಈಗ ರಂಗ ವಿಮರ್ಶೆಯ ಮೂಲಕ ರಂಗ ಚರಿತ್ರೆಯನ್ನು ದಾಖಲಿಸಿದ್ದಾರೆ ಎಂದರು.
ಪತ್ರಕರ್ತ, ಬಹುರೂಪಿಯ ಜಿ ಎನ್ ಮೋಹನ್ ಅವರು ಮಾತನಾಡಿ ಪ್ರಶ್ನೆ ಕೇಳುವುದನ್ನು ಸಾಹಿತ್ಯವಾಗಲೀ, ರಂಗಭೂಮಿಯಾಗಲೀ ಪ್ರೇರೇಪಿಸುತ್ತದೆ. ಈ ಕಾರಣಕ್ಕಾಗಿಯೇ ವ್ಯವಸ್ಥೆ ಈ ಎರಡೂ ಲೋಕವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ ಎಂದರು.
ರಂಗಭೂಮಿ ಈ ಮೊದಲಿನಿಂದಲೂ ಬದಲಾವಣೆಯ ಅಸ್ತ್ರ. ಹೀಗಾಗಿ ರಂಗಭೂಮಿ ಜಡತ್ವವನ್ನು, ಪ್ರಗತಿ ವಿರೋಧಿ ಮನಸ್ಸುಗಳನ್ನು ಪ್ರಶ್ನಿಸುತ್ತದೆ ಎಂದರು.
ಕೃತಿ ಬಿಡುಗಡೆ ಮಾಡಿದ ದೀಪಾ ಹಿರೇಗುತ್ತಿ ಅವರು ಓದುವ ಸಂಸ್ಕೃತಿಯನ್ನು ಇನ್ನಷ್ಟು ವ್ಯಾಪಕವಾಗಿ ಬೆಳಸಬೇಕಾದ ಅಗತ್ಯವಿದೆ. ಓದುವ ಮನಸ್ಸುಗಳು ಎಂದಿಗೂ ಸಕಾರಾತ್ಮಕವಾಗಿ ಕಟ್ಟುವ ಕೆಲಸವನ್ನು ಮಾಡುತ್ತದೆ. ಓದು ವ್ಯಾಪಕವಾಗಲು ಚಿಂತನ ನಡೆಸಿದ ಪ್ರಯೋಗಗಳು ಇಡೀ ರಾಜ್ಯಕ್ಕೆ ಮಾದರಿ ಎಂದರು
ಕೃತಿ ಕುರಿತು ಸಮಾಜ ವಿಜ್ಞಾನಿ ಡಾ. ಪ್ರಕಾಶ್ ಭಟ್ ಮಾತನಾಡಿದರು. ಕೃತಿಕಾರ ಕಿರಣ್ ಭಟ್ ಅವರು ತಾವು ರಂಗಭೂಮಿಯಲ್ಲಿ ಸಾಗಿ ಬಂದ ಹಿನ್ನೆಲೆಯನ್ನು ವಿವರಿಸಿದರು. ಪ್ರೀತಿಪದದ ಯಮುನಾ ಗಾಂವ್ಕರ್ ಕಾರ್ಯಕ್ರಮ ನಿರ್ವಹಿಸಿದರು. ಮಾಸ್ತಿಗೌಡ ವಂದಿಸಿದರು.ಮಾಧವಿ ಭಂಡಾರಿ ರಂಗಗೀತೆ ಹಾಡಿದರು.