ಕಾರವಾರ: ನಗರಸಭೆ ವ್ಯಾಪ್ತಿಯಲ್ಲಿರುವ ಗುಡ್ಡಳ್ಳಿ ಗ್ರಾಮದ ಕಚ್ಚಾರಸ್ತೆಯು ಮಳೆಯಿಂದ ಕೊಚ್ಚಿಹೋಗಿದ್ದು, ಸ್ಥಳೀಯ ಜನರು ಓಡಾಟಕ್ಕೂ ಪರದಾಡುವಂತಾಗಿದೆ. ತಗ್ಗು ದಿಣ್ಣೆಯಿಂದ ಕೂಡಿರುವ ಈ ಕಡಿದಾದ ಮಾರ್ಗದಲ್ಲಿ ದ್ವಿಚಕ್ರ ವಾಹನ ಸಂಚಾರವಿರಲಿ ಕಾಲ್ನಡಿಗೆಯೂ ಕಷ್ಟಸಾಧ್ಯವಾಗಿದೆ.

ನಗರದ ಹೈಚರ್ಚ್‌ ರಸ್ತೆ ಬಳಿಯಿಂದ ಸುಮಾರು 7 ಕಿ.ಮೀ ಗುಡ್ಡ ಹತ್ತಿದರೆ ಗುಡ್ಡಳ್ಳಿ ಗ್ರಾಮ ಸಿಗುತ್ತದೆ. ಸಮುದ್ರಮಟ್ಟದಿಂದ 1800 ಅಡಿ ಎತ್ತರವಿರುವ ಈ ಗ್ರಾಮದಲ್ಲಿ ಸುಮಾರು 25 ಮನೆಗಳಿದ್ದು, 150ಕ್ಕೂ ಅಧಿಕ ಜನಸಂಖ್ಯೆ ಇದೆ. ಇದು 31 ವಾರ್ಡ್‌ ವ್ಯಾಪ್ತಿಯಲ್ಲಿದ್ದರೂ ಹಿಂದಿನಿಂದ ಮೂಲಸೌಕರ್ಯದಿಂದ ವಂಚಿತವಾಗಿದೆ.

ತಪ್ಪದ ಬವಣೆ: ಅಗತ್ಯ ವಸ್ತುಗಳಿಂದ ಹಿಡಿದು ಎಲ್ಲದಕ್ಕೂ ಗುಡ್ಡಳ್ಳಿ ಜನರು ಕಾರವಾರ ನಗರವನ್ನೇ ಅವಲಂಬಿಸಿದ್ದಾರೆ. ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮಾತ್ರ ಇದ್ದು, ಆನಂತರದ ಶಿಕ್ಷಣಕ್ಕೆ ಮಕ್ಕಳು ಗುಡ್ಡ ಇಳಿದು ನಗರದ ಶಾಲೆಗೆ ಬರಬೇಕು. ಅನಾರೋಗ್ಯ ಪೀಡಿತರನ್ನು ಅಥವಾ ಗರ್ಭಿಣಿಯರನ್ನು ಆಸ್ಪತ್ರೆಗೆ ಸಾಗಿಸಲು ಕಂಬಳಿಯಲ್ಲಿ ಹೊತ್ತು ತರಬೇಕು. ಹೊಟ್ಟೆಪಾಡಿಗೆ ಕೆಲ ಮಹಿಳೆಯರು ಕಟ್ಟಿಗೆ ಸಂಗ್ರಹಿಸಿ, ಅದನ್ನು ನಗರದಲ್ಲಿ ಮಾರಾಟ ಮಾಡಿ ವಾಪಸ್‌ ಮರಳುತ್ತಾರೆ.

RELATED ARTICLES  ಮುರುಡೇಶ್ವರದ ದಲಿತರ ಬಾಕಡ್ ಕೇರಿಯಲ್ಲಿ ಕುಡಿಯುವ ನೀರಿನ ಸಮಸ್ಯೆ : ದಿನೇ ದಿನೇ ಹೆಚ್ಚುತ್ತಿದೆ ಬವಣೆ.

ಕಚ್ಚಾ ರಸ್ತೆ ನಿರ್ಮಾಣ: ‘ಮಳೆಗಾಲ ಪೂರ್ವದಲ್ಲಿ ನಗರದ ಹೈಚರ್ಚ್‌ ಬಳಿಯಿಂದ 5 ಕಿ.ಮೀ.ವರೆಗೆ ನಗರಸಭೆಯು ಜೆಸಿಬಿ ನೆರವಿನಿಂದ ಕಚ್ಚಾ ರಸ್ತೆಯನ್ನು ನಿರ್ಮಿಸಿಕೊಟ್ಟಿತ್ತು. ಈ ಕಾರ್ಯಕ್ಕೆ ಸ್ಥಳೀಯರಾದ ನಾವೆಲ್ಲ ಕೈಜೋಡಿಸಿದ್ದೆವು. ಈ ರಸ್ತೆಯಿಂದ ಊರಿನವರಿಗೆ ಸಹಾಯಕವಾಗಿತ್ತು. ಆದರೆ ಮಳೆಯ ಆರ್ಭಟಕ್ಕೆ ಈ ಕಚ್ಚಾರಸ್ತೆ ಕೊಚ್ಚಿಹೋಗಿದ್ದು, ಇದೀಗ ವಾಹನಗಳನ್ನು ಕೊಂಡೊಯ್ಯಲು ಸಾಧ್ಯವಾಗುತ್ತಿಲ್ಲ’ ಎಂದು ಸ್ಥಳೀಯ ಸುರೇಶ ಗೌಡ ತಿಳಿಸಿದರು.

RELATED ARTICLES  ವಿದ್ಯುತ್ ಶಾರ್ಟ ಸರ್ಕ್ಯೂಟ್ : ಸುಟ್ಟು ಕರಕಲಾದ ಮನೆ, ಅಂಗಡಿ

ಜೆಸಿಬಿ ಕಳುಹಿಸಲಾಗುವುದು: ‘ಕಚ್ಚಾ ರಸ್ತೆಯನ್ನು ಸರಿಪಡಿಸಿಕೊಡುವಂತೆ ಗುಡ್ಡಳ್ಳಿ ಜನರು ಬೇಡಿಕೆ ಇಟ್ಟಿದ್ದಾರೆ. ನಗರಸಭೆಯ ಜೆಸಿಬಿ ಕೆಟ್ಟಿದ್ದು, ಅದು ಇನ್ನೂ ದುರಸ್ತಿಯಾಗಿಲ್ಲ. ಹೀಗಾಗಿ ಜೆಸಿಬಿ ಲಭ್ಯತೆ ಇಲ್ಲದೇ ಇರುವ ಕಾರಣ ರಸ್ತೆ ದುರಸ್ತಿಗೆ ಸ್ವಲ್ಪ ಹಿನ್ನಡೆಯಾಗಿದೆ. 2–3 ದಿನಗಳಲ್ಲಿ ಖಾಸಗಿ ಜೆಸಿಬಿಯನ್ನಾದರೂ ಬಾಡಿಗೆಗೆ ತೆಗೆದುಕೊಂಡು ಅಲ್ಲಿಗೆ ಕಳುಹಿಸಿಕೊಡಲಾಗುದು’ ಎಂದು ಪೌರಾಯುಕ್ತ ಎಸ್‌.ಯೋಗೇಶ್ವರ ತಿಳಿಸಿದರು.