Satwadhara News

ರಾಜ್ಯಕ್ಕೆ 6 ನೇ ರ್ಯಾಂಕ್ ಪಡೆದ ವಿಧಾತ್ರಿಯ ವಿದ್ಯಾರ್ಥಿನಿ : ನಿರಂತರ ಐದನೇ ವರ್ಷದ ಸಾಧನೆ.

ಕುಮಟಾ : ಮಂಗಳೂರಿನ ವಿಧಾತ್ರಿ ಅಕಾಡೆಮಿ, ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ಜೊತೆಗೆ ಒಡಂಬಡಿಕೆ ಮಾಡಿಕೊಂಡು ನಡೆಸುತ್ತಿರುವ ತಾಲೂಕಿನ ವಿದ್ಯಾಗಿರಿಯ ಸರಸ್ವತಿ ಪಿ.ಯು ಕಾಲೇಜಿನ ವಿದ್ಯಾರ್ಥಿಗಳು ಈ ಹಿಂದಿನಂತೆ ರಾಜ್ಯಮಟ್ಟದ ಸಾಧನೆ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ೧ ರಲ್ಲಿ ಅತ್ಯುತ್ತಮ ಅಂಕಗಳಿಸಿ ರಾಜ್ಯ ಮಟ್ಟದಲ್ಲಿ 6 ನೇ ಸ್ಥಾನವನ್ನು ಪಡೆದು ಸಂಸ್ಥೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ಅನನ್ಯಾ ಭಾಗ್ವತ್ ೬೦೦ ಕ್ಕೆ ೫೯೪ ಅಂಕ ಗಳಿಸಿ ರಾಜ್ಯ ಮಟ್ಟದಲ್ಲಿ 6ನೇ ಸ್ಥಾನ ಪಡೆದು ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಜೊತೆಗೆ ಉತ್ತರ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾಳೆ. ಸ್ವಾತಿ ಗಾಯತೊಂಡೆ ಹಾಗೂ ಸಾಗರ ನಾಯ್ಕ 588 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ. ಸುಮೇಧಾ ಭಟ್ 587 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 205 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅದರಲ್ಲಿ115 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆ ಹೊಂದಿದ್ದಾರೆ.

ವಿಧಾತ್ರಿ ಅಕಾಡೆಮಿಯ ಉಪನ್ಯಾಸಕರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಕಳೆದ ಐದು ವರ್ಷಗಳಿಂದಲೂ ರಾಜ್ಯಮಟ್ಟದಲ್ಲಿ ಸಾಧನೆ ಮಾಡುತ್ತಿರುವ ವಿದ್ಯಾರ್ಥಿಗಳು, ಈ ಸಾಲಿನಲ್ಲಿಯೂ ತಮ್ಮ ಸಾಧನೆ ಮುಂದುವರೆಸಿದ್ದಾರೆ.

ಇನ್ನು ವಾಣಿಜ್ಯ ವಿಭಾಗದಲ್ಲಿ ಅನನ್ಯಾ ಭಟ್ಟ ೬೦೦ ಕ್ಕೆ 586 ಅಂಕಗಳಿಸಿ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದಾಳೆ. ಸಮರ್ಥ ಕಾಮತ್ 578 ಅಂಕಗಳಿಸಿ ಕಾಲೇಜಿಗೆ ದ್ವಿತೀಯ ಸ್ಥಾನ ಹಾಗೂ ಸಂಜವ ಡಿಸೋಜ 568 ಅಂಕಗಳಿಸಿ ಕಾಲೇಜಿಗೆ ತೃತೀಯ ಸ್ಥಾನ ಪಡೆದಿದ್ದಾರೆ. ಒಟ್ಟು 36 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಅದರಲ್ಲಿ 20 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಮತ್ತು ಉಳಿದ ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕ ಗುರುರಾಜ ಶೆಟ್ಟಿ, ಪ್ರಾಂಶುಪಾಲ ಕಿರಣ ಭಟ್ಟ, ಉಪ ಪ್ರಾಂಶುಪಾಲೆ ಸುಜಾತಾ ಹೆಗಡೆ, ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.