Satwadhara News

ಬಾಡದ ಕಾಂಚಿಕಾಂಬೆಗೆ ಉಘೇ ಎಂದ ಭಕ್ತಗಣ

ಕುಮಟಾ : ಜಿಲ್ಲೆಯ ಪ್ರಸಿದ್ದ ಜಾತ್ರೆಗಳಲ್ಲಿ ಒಂದಾದ ಕುಮಟಾ ತಾಲೂಕಿನ ಶ್ರೀ ಕಾಂಚಿಕಾ ಪರಮೇಶ್ವರಿ ದೇವರ ಜಾತ್ರಾ ಮಹೋತ್ಸವವು ಅತ್ಯಂತ ಅದ್ದೂರಿಯಾಗಿ ನಡೆಯಿತು. ತಾಲೂಕಿನ ಸುತ್ತಮುತ್ತಲಿನಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತಾಧಿಗಳು ಆಗಮಿಸಿ ಶ್ರೀ ದೇವರ ದರ್ಶನ ಪಡೆದು, ರಥ ಎಳೆದು ಪುನೀತರಾದರು. ಸರ್ವಾಭರಣ ಭೂಷಿತೆಯಾದ ತಾಯಿ ಕಾಂಚಿಕಾ ಪರಮೇಶ್ವರಿ ಭಕ್ತರಿಂದ ಪೂಜೆ ಸ್ವೀಕರಿಸಿದಳು.

ಪುರಾಣ ಪ್ರಸಿದ್ಧ ಬಾಡದ ಶ್ರೀ ಕಾಂಚಿಕಾ ಪರಮೇಶ್ವರಿ ದೇವಾಲಯವು ಅತ್ಯಂತ ಶಕ್ತಿಯುತ, ಭಕ್ತರ ಇಷ್ಟಾರ್ಥ ಸಿದ್ಧಿಕ್ಷೇತ್ರವಾಗಿದ್ದು, ಪ್ರತೀ ವರ್ಷವೂ ಇಲ್ಲಿ ಜಾತ್ರಾ ಮಹೋತ್ಸವ ನಡೆಯುತ್ತದೆ. ಅಂತೆಯೇ ಶನಿವಾರ ನಡೆದ ಶ್ರೀ ದೇವರ ಜಾತ್ರಾ ಮಹೋತ್ಸವವು ಅತ್ಯಂತ ವಿಜ್ರಂಭಣೆಯಿಯಿಂದ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನಡೆಯಿತು. ಸಾವಿರಾರು ಭಕ್ತರ ಒಗ್ಗೂಡುವಿಕೆಯಲ್ಲಿ ತಾಯಿ ಶ್ರೀ ಕಾಂಚಿಕಾoಬ ಪರಮೇಶ್ವರಿ ದೇವರ ಮಹಾ ರಥೋತ್ಸವು ಸಂಪನ್ನಗೊಂಡಿತು.

ಇನ್ನು ಸಾರ್ವಜನಿಕರು ಇಷ್ಠಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿ ಶ್ರೀ ದೇವರಿಗೆ ಉಡಿ ಸೇವೆ, ಉರುಳು ಸೇವೆ, ತುಲಾಬಾರ ಸೇವೆ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸುವುದು ಇಲ್ಲಿನ ವಿಶೇಷವಾಗಿದ್ದು, ಅದೇ ರೀತಿ ವಿವಿದೆಡೆಯಿಂದ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತರು ತಾಯಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಿದರು. ಸಾಯಂಕಾಲದ ವೇಳೆ ನಡೆದ ಮಹಾ ರಥದಲ್ಲಿ ಆಸಿನಳಾದ ಕಾಂಚಿಕಾಂಬೆಯನ್ನು ಕಣ್ತುಂಬಿಕೊಂಡು, ಸಂಪ್ರದಾಯದಂತೆ ರಥಕ್ಕೆ ಬಾಳೆ ಹಣ್ಣು ಎಸೆದು ಭಕ್ತರು ಕೃತಾರ್ಥರಾದರು.