ಕುಮಟಾ : ಕಲೆ ನಿಜಕ್ಕೂ ಜಗತ್ತಿಗೆ ಒಂದು ಕೊಡುಗೆ. ಮಾನವ ಅನುಭವದಲ್ಲಿ ನಾವು ಬಯಸುವುದು ಅದನ್ನೇ. ಕಲೆ ನಮ್ಮ ಜೀವನಕ್ಕೆ ಅರ್ಥವನ್ನು ನೀಡುತ್ತದೆ ಮತ್ತು ನಮ್ಮ ಜಗತ್ತನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ನಮ್ಮ ಸಂಸ್ಕೃತಿಯ ಅತ್ಯಗತ್ಯ ಭಾಗವಾಗಿದೆ ಎಂದು ರೋಟರಿ ಸರ್ವೀಸ್ ಸೊಸೈಟಿಯ ನಿಕಟಪೂರ್ವ ಅಧ್ಯಕ್ಷ ಅರುಣ ಉಭಯಕರ್ ಹೇಳಿದರು. ನಾದಶ್ರೀ ಕಲಾ ಕೇಂದ್ರದ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಕಲೆ ನಮ್ಮ ಭಾವನೆಗಳನ್ನು ಆಳವಾಗಿ ಅರ್ಥಮಾಡಿಕೊಳ್ಳಲು ಅನುವು ಮಾಡಿಕೊಡುತ್ತದೆ. ಇದು ನಮ್ಮ ಸ್ವಯಂ ಅರಿವನ್ನು ಹೆಚ್ಚಿಸುತ್ತದೆ ಮತ್ತು ಹೊಸ ಆಲೋಚನೆಗಳು ಮತ್ತು ಅನುಭವಗಳಿಗೆ ನಾವು ಮುಕ್ತರಾಗಲು ಅನುವು ಮಾಡಿಕೊಡುತ್ತದೆ. ಆದ್ದರಿಂದ ಕಲೆ ನಮ್ಮ ಮನಸ್ಸು ಮತ್ತು ಹೃದಯಗಳನ್ನು ತೆರೆಯುತ್ತಲೇ ಇರುತ್ತದೆ ಅಂತಹ ಕಲೆಯನ್ನು ನಿರಂತರವಾಗಿ ಕಲಿಸುವ ಕಾರ್ಯವನ್ನು ನಾದಶ್ರೀ ಸಂಸ್ಥೆ ಮಾಡುತ್ತಿದೆ ಎಂದರು.
ರೋಟರಿ ಸರ್ವೀಸ್ ಸೊಸೈಟಿಯ ಅಧ್ಯಕ್ಷ ಸತೀಶ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ ಸಂಸ್ಥೆಯ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು. ಕಿರಣ ನಾಯಕ, ಜಿ.ಎಸ್ ಹೆಗಡೆ, ಎಂ.ಬಿ ಪೈ ವೇದಿಕೆಯಲ್ಲಿ ಇದ್ದರು. ವಿದುಷಿ ರೇಷ್ಮಾ ಭಟ್ಟ ಅತಿಥಿ ಕಲಾವಿದರಾಗಿ ಗಾಯನ ಪ್ರಸ್ತುತಪಡಿಸಿದರು. ನಾದಶ್ರೀ ವಿದ್ಯಾರ್ಥಿಗಳು ಗಾಯನ, ವಾದನ, ಭರತನಾಟ್ಯ ಕಾರ್ಯಕ್ರಮ ನೀಡಿದರು.