Satwadhara News

ಹಾಸ್ಯ ನಟ ಬ್ಯಾಂಕ್ ಜನಾರ್ಧನ ಇನ್ನಿಲ್ಲ.

ಬೆಂಗಳೂರು: 500 ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಜನರನ್ನು ನಕ್ಕು-ನಲಿಸಿದ ಹಾಸ್ಯ ನಟ ಬ್ಯಾಂಕ್ ಜನಾರ್ಧನ (76) ನಿಧನರಾಗಿದ್ದಾರೆ. ಮಧ್ಯರಾತ್ರಿ 2:30ರ ಸುಮಾರಿಗೆ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಟ ಬ್ಯಾಂಕ್ ಜನಾರ್ಧನ್ ನಿಧನರಾಗಿದ್ದಾರೆ.
ಸುಲ್ತಾನ್ ಪಾಳ್ಯದ ನಿವಾಸದಲ್ಲಿರುವ ಅವರ ನಿವಾಸದಲ್ಲಿ ಪಾರ್ಥೀವ ಶರೀರ ಇಡಲಾಗಿದ್ದು, ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 3 – 4 ಗಂಟೆ ವೇಳೆಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

1948ರಲ್ಲಿ ಬ್ಯಾಂಕ್ ಜನಾರ್ಧನ್ ಅವರು ಬೆಂಗಳೂರಿನಲ್ಲಿ ಜನಿಸಿದರು. 1985ರಲ್ಲಿ ಪಿತಾಮಹ ಚಿತ್ರದ ಮೂಲಕ ಅವರು ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ನಾಟಕಗಳಿಂದ ಆರಂಭವಾದ ಅವರ ಬದುಕು ನಂತರ ಸಿನಿಮಾಗಳತ್ತ ಹೊರಳಿತು. ಆರಂಭದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸಿದ್ದ ಅವರು ನಂತರ ದಿನಗಳಲ್ಲಿ ಪ್ರಮುಖ ಪೋಷಕ ಪಾತ್ರಗಳಲ್ಲಿ ನಟಿಸುವ ಮೂಲಕ ಕರ್ನಾಟಕದ ಮನೆ ಮಾತಾದರು. ಅವರು ಕನ್ನಡ ಚಿತ್ರಗಂಗದಲ್ಲಿ ಹಾಸ್ಯ ಹಾಗೂ ಪೋಷಕ ನಟನಾಗಿಯೇ ಗುರುತಿಸಿಕೊಂಡಿದ್ದರು. 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅವರು ನಟನೆ ಮಾಡಿದ್ದಾರೆ.

2023ರ ಸೆಪ್ಟಂಬರ್ 26ರಂದು ಹೃದಯಘಾತ ಆಗಿತ್ತು. ಬಳಿಕ ಚಿಕಿತ್ಸೆಯ ಪಡೆದುಕೊಂಡು ಚೇತರಿಸಿಕೊಂಡಿದ್ದರು. ಕನ್ನಡ ಸಿನಿಮಾಗಳಲ್ಲಿ 80, 90ರ ದಶಕದ ಬಹುಬೇಡಿಕೆ ಹೊಂದಿದ್ದ ಹಾಸ್ಯನಟರಲ್ಲಿ ಒಬ್ಬರಾದ ಜನಾರ್ಧನ ಶ್, ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ, ಜೀ ಬೂಂಬಾ, ಗಣೇಶ ಸುಬ್ರಮಣ್ಯ, ಕೌರವ ಸೇರಿದಂತೆ 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾ ಅಲ್ಲದೇ, ಕಿರುತೆರೆ ಹಾಗೂ ರಂಗಭೂಮಿಯಲ್ಲೂ ತಮ್ಮದೇ ಆದ ಛಾಪು ಮೂಡಿಸಿದ್ದರು. ಕಿರುತೆರೆಯಲ್ಲಿ ಪಾಪ ಪಾಂಡು, ಜೋಕಾಲಿ, ರೋಬೋ ಫ್ಯಾಮಿಲಿ, ಮಾಂಗಲ್ಯ ಧಾರಾವಾಹಿಗಳಲ್ಲಿಯೂ ಕೂಡ ಬ್ಯಾಂಕ್ ಜನಾರ್ಧನ ಅವರು ನಟನೆ ಮಾಡಿದ್ದಾರೆ.