ಉತ್ತರ ಪ್ರದೇಶ: ಉತ್ತರ ಪ್ರದೇಶ ರಾಜ್ಯವನ್ನು ರಾಮಾಯಣದಲ್ಲಿ ಉಲ್ಲೇಖಿಸಿದಂತಹ ರಾಮರಾಜ್ಯವನ್ನಾಗಿ ಪರಿವರ್ತನೆ ಮಾಡುವುದೇ ನಮ್ಮ ಗುರಿ, ನಮ್ಮ ಕನಸು ಎಂದು ಉತ್ತರಪ್ರದೇಶದ ಮುಖ್ಯಮಂತ್ರಿಯಾದ ಯೋಗಿ ಆದಿತ್ಯನಾಥ್ ರವರು ಹೇಳಿದ್ದಾರೆ. ಉತ್ತರಪ್ರದೇಶದ ಸರಯೂ ನದಿಯ ತೀರದಲ್ಲಿ ನಡೆಸಿದ ಬೃಹತ್ ದೀಪೋತ್ಸವವನ್ನು ಆಚರಿಸಿದ ಸಂದರ್ಭದಲ್ಲಿ ಯೋಗಿ ಈ ಮಾತುಗಳನ್ನು ಹೇಳಿದರು.
ಉತ್ತರಪ್ರದೇಶದಲ್ಲಿ ರಾಮರಾಜ್ಯ ಸ್ಥಾಪನೆ ನಮ್ಮ ಕನಸು. ಇನ್ನು ಅಯೋಧ್ಯೆಯು ಮಾನವತೆಯ ಪುಣ್ಯಭೂಮಿಯಾಗಿದೆ. ರಾಮರಾಜ್ಯ ಪೌರಾಣಿಕ ಪರಿಕಲ್ಪನೆಯ ಮೂಲಕ ಮಾನವತೆ ಎಂದರೇನು ಎಂಬುದನ್ನು ನಾವು ಇಡಿಯ ಜಗತ್ತಿಗೆ ಕಲಿಸಿದವರಾಗಿದ್ದೇವೆ ಎಂದರು. ರಾಮರಾಜ್ಯ ಸ್ಥಾಪನೆ ಮೂಲಕ ಉತ್ತರಪ್ರದೇಶವನ್ನು ಭಾರತ ಮತ್ತು ವಿಶ್ವದ ಪ್ರವಾಸೋದ್ಯಮ ಕೇಂದ್ರವನ್ನಾಗಿ ಮಾಡಲಾಗುವುದು. ಆಯೋಧ್ಯೆಯ ಅಭಿವೃದ್ಧಿಗಾಗಿ ಸರ್ಕಾರ 133 ಕೋಟಿ ರುಪಾಯಿಯನ್ನು ಬಿಡುಗಡೆ ಮಾಡಿದೆ. ಇನ್ನು ಆಯೋಧ್ಯೆಯಲ್ಲಿ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು ಎಂದು ಯೋಗಿ ಹೇಳಿದರು.