ಶ್ರೀನಗರ: ಗಡಿಯಲ್ಲಿ ಭಾರತೀಯ ಯೋಧರೊಂದಿಗೆ ದೀಪಾವಳಿ ಆಚರಿಸಿರುವ ಪ್ರಧಾನಿ ನರೇಂದ್ರ ಮೋದಿ ಯೋಧರ ತಪಸ್ಸು ಮತ್ತು ತ್ಯಾಗಗಳನ್ನು ಕೊಂಡಾಡಿದ್ದು, ಯೋಧರನ್ನು ನನ್ನದೇ ಕುಟುಂಬದಂತೆ ಭಾವಿಸುತ್ತೇನೆ ಎಂದಿದ್ದಾರೆ.
ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ ಕೂಗಳತೆ ದೂರದಲ್ಲಿರುವ ಗುರೇಜ್ ಸೆಕ್ಟರ್ ಗೆ ಭೇಟಿ ನೀಡಿ, ಯೋಧರಿಗೆ ಸಿಹಿ ತಿನಿಸಿರುವ ಪ್ರಧಾನಿ ನರೇಂದ್ರ ಮೋದಿ, ಯೋಧರನ್ನುದ್ದೇಶಿಸಿ ಮಾತನಾಡಿದ್ದು, ಇತರರಂತೆಯೇ ನಾನೂ ಸಹ ತಮ್ಮ ಕುಟುಂಬದವರೊಂದಿಗೆ ದೀಪಾವಳಿ ಆಚರಿಸಲು ಇಷ್ಟಪಡುತ್ತೇನೆ, ಯೋಧರು ನನ್ನ ಕುಟುಂಬದವರಾಗಿದ್ದು, ದೀಪಾವಳಿಯನ್ನು ಆಚರಿಸಲು ಬಂದಿರುವುದಾಗಿ ಹೇಳಿದ್ದಾರೆ.
ಯೋಧರೊಂದಿಗೆ ಸಮಯ ಕಳೆದರೆ ಹೊಸ ಚೈತನ್ಯ ಮೂಡುತ್ತದೆ ಎಂದಿರುವ ಪ್ರಧಾನಿ ಪ್ರತಿಕೂಲ ಪರಿಸ್ಥಿತಿ, ವಾತಾವರಣದಲ್ಲಿಯೂ ಕಾರ್ಯ ನಿರ್ವಹಿಸುವ ಯೋಧರ ತಪಸ್ಸು ಹಾಗೂ ತ್ಯಾಗಳನ್ನು ಕೊಂಡಾಡಿದ್ದು, ಯೋಧರ ಹಿತಕಾಯಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಹೇಳಿದ್ದಾರೆ.