ಶಿರಸಿ: ಹಿಂದು ದೇವಾಲಯಗಳಿಗೆ ಸರ್ಕಾರ ವ್ಯವಸ್ಥಾಪನಾ ಸಮಿತಿಯನ್ನು ತುರ್ತಾಗಿ ನೇಮಿಸುತ್ತಿದೆ. ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ಬರುವವರಿಗೆ ದೇವಾಲಯ ವ್ಯವಸ್ಥೆಯಲ್ಲಿ ಗೊಂದಲ ಸೃಷ್ಟಿಸುವುದನ್ನು ಬಿಡಬೇಕು ಎಂದು ಆಗ್ರಹಿಸಿ ಅ.25ರಂದು ಶಿರಸಿಯಲ್ಲಿ ಪ್ರತಿಭಟನಾ ಮಹಾಸಭೆ ಆಯೋಜಿಸಲಾಗಿದೆ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾ ಡಿದ ಅವರು, ಹಿಂದು ಧಾರ್ವಿುಕ ಸಂಸ್ಥೆಗಳು ಮತ್ತು ಧರ್ವದಾಯ ದತ್ತಿ ಅಧಿನಿಯಮ 2001ರ ಕಾಯ್ದೆ ಮತ್ತು 2011ರಲ್ಲಿ ಪುನಃ ಜಾರಿಗೆ ತಂದ ಕಾಯ್ದೆಯನ್ನು ಕಾನೂನು ಬಾಹಿರ ಎಂದು ಹೈಕೋರ್ಟ್ ರದ್ದು ಪಡಿಸಿದೆ. ಆದರೆ, ಸರ್ಕಾರ ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿ, ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಧಾರ್ವಿುಕ ಪರಿಷತ್ ಮೂಲಕ ದೇವಾಲಯಗಳ ಮೇಲೆ ಹಿಡಿತ ಸಾಧಿಸಲು ಮುಂದಾಗಿದೆ. ನ್ಯಾಯಾಲಯದಲ್ಲಿ ಪ್ರಕರಣ ಅಂತಿಮ ವಿಚಾರಣೆ ಆಗುವ ಮೊದಲೇ ಸರ್ಕಾರಕ್ಕೆ ದೇವಾಲಯಗಳ ಮೇಲೆ ಹತೋಟಿ ಸಾಧಿಸುವ ಹಠ ಏಕೆ? ಎಂದರು.
ಉತ್ತರ ಕನ್ನಡವೇ ಏಕೆ ಗುರಿ?: ಸೆ. 5ರಂದು ಡಿಸಿ ಅಧಿಸೂಚನೆ ಹೊರಡಿಸಿ ಜಿಲ್ಲೆಯ 113 ದೇವಾಲಯಗಳಿಗೆ ಮೊಕ್ತೇಸರ ಮಂಡಳಿ ರಚಿಸಲು ಮುಂದಾಗಿದ್ದಾರೆ. ರಾಜ್ಯದ ಬೇರಾವ ಜಿಲ್ಲೆಯಲ್ಲಿಯೂ ಅನುಷ್ಠಾನಗೊಳ್ಳದ ಈ ಆದೇಶವನ್ನು ಉತ್ತರಕನ್ನಡ ಜಿಲ್ಲೆಯಲ್ಲಿ ಜಾರಿಗೊಳಿಸಲು ತರಾತುರಿ ಏಕೆ ಎಂದು ಪ್ರಶ್ನಿಸಿದರು.
ಹಲವು ಬಾರಿ ಪ್ರತಿಭಟನೆ: ಈ ಕಾಯ್ದೆ ಜಾರಿಯಾಗುವ ಮುನ್ನವೇ ಪ್ರತಿಭಟನೆ ವ್ಯಕ್ತಗೊಂಡಿತ್ತು. ಮೊದಲ ಬಾರಿ ಬೆಂಗಳೂರಿನಲ್ಲಿ ಸ್ವರ್ಣವಲ್ಲೀ ಶ್ರೀ ನೇತೃತ್ವದಲ್ಲಿ ಸಭೆ ನಡೆಸಿ ಪ್ರತಿಭಟಿಸಲಾಗಿತ್ತು. 3ನೇ ಬಾರಿ ಪ್ರತಿಭಟನಾ ಸಭೆ ನಡೆಸುವ ವೇಳೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿತ್ತಲ್ಲದೇ ಸ್ವತಃ ಸಚಿವ ವಿ.ಎಸ್. ಆಚಾರ್ಯ ಸಭೆಯಲ್ಲಿ ಪಾಲ್ಗೊಂಡಿದ್ದರು. ಈಗ ವ್ಯವಸ್ಥಾಪನಾ ಸಮಿತಿ ರಚಿಸುವವರೆಗೂ ಬೆಳವಣಿಗೆಯಾಗಿದೆ ಎಂದರು.