ಹೊನ್ನಾವರ : ಉತ್ತರಕನ್ನಡ ಜಿಲ್ಲೆ ಹೊನ್ನಾವರ ತಾಲ್ಲೂಕಿನ ಹೊಸಾಕುಳಿ ಗ್ರಾಮದ ಹಾಲಕ್ಕಿ ಜನಾಂಗ ಸಂಭ್ರಮೋತ್ಸವ. ಹೌದು, ಈ ಜನಾಂಗಕ್ಕೆ ದೀಪಾವಳಿ ಕೇವಲ ಹಬ್ಬವಲ್ಲ, ಜಾನಪದ ಕಲಾ ಪ್ರದರ್ಶನ ಉಳಿಸಿ ಬೆಳೆಸಿಕೊಂಡು ಬರುವ ಸಂದರ್ಭವೂ ಹೌದು. ಇದಕ್ಕಾಗಿಯೇ ಬಲಿಪಾಡ್ಯಮಿ ದಿನ ಆರಂಭಗೊಳ್ಳುವ ಈ ಜಾನಪದ ನೃತ್ಯ ವೈಶಿಷ್ಠ್ಯಪೂರ್ಣವೂ, ಜನಪದ ಕಲೆಯನ್ನು ಜೀವಂತ ಆಗಿರುವ ಕಾರ್ಯವೂ ಆಗಿದೆ.
ಆಚರಣೆ ಹೀಗೆ
ಬಲಿಪಾಡ್ಯಮಿ ಹಿಂದಿನ ರಾತ್ರಿಯಿಂದ ಬಲಿಪಾಡ್ಯಮಿಯ ಬೆಳಗಿನ ಜಾವದವರೆಗೆ ಮಹಾವಿಷ್ಣುವಿನ ವಾಹನವಾದ ಗರುಡನ ವೇಷ ಧರಿಸಿ ಮನೆ ಮನೆಗೆ ತೆರಳಿ ನೃತ್ಯ ಪ್ರದರ್ಶಿಸುತ್ತಾರೆ. ಗೋಣಿ ಚೀಲದ ಮೇಲ್ಭಾಗದಲ್ಲಿ ಪುಂಡಿ ನಾರಿನಿಂದ ತಯಾರಿಸಿರುವ ದಾರಗಳಿಂದ ಕೂದಲಿನಂತಹ ರಚನೆ ಮಾಡಲಾದ ಉದ್ದತೋಳಿನ ಅಂಗಿ ಮತ್ತು ಪ್ಯಾಂಟ್, ಗರುಡ ಪಕ್ಷಿಯ ಮುಖವಾಡ ಇವು ಗರುಡ ವೇಷಧಾರಿಯ ವೇಷ ಭೂಷಣಗಳು.
ಕೇವಲ ಒಂದು ಪಾತ್ರಧಾರಿ ಮಾತ್ರ ಈ ಪ್ರದರ್ಶನದ ಪಾತ್ರವಲ್ಲ. ಮುಖ್ಯ ಪಾತ್ರ ಗರುಡನದ್ದು. ಇದರ ಜೊತೆ ಪರಿವಾರ ದೇವತೆಗಳು, ದೇವತಾ ಸಖಿಯರು, ದಾಸ-ದಾಸಿಯರು ಹೀಗೆ ೨೫ ರಿಂದ ೩೦ ಜನರು ಕಲಾವಿದರು ತಂಡದಲ್ಲಿದ್ದು, ಅವರಲ್ಲಿ ಕೆಲ ವೇಷಧಾರಿಗಳು ಬರಿ ಮೈಮೇಲೆ ಬೆಲ್ಲದೊಂದಿಗೆ ಕಲಸಿದ ಮಂಡಕ್ಕಿ ಬಳಿದುಕೊಳ್ಳುತ್ತಾರೆ.
ಇನ್ನು ಕೆಲವರು ಹಾಸ್ಯ ವೇಷ, ಸ್ತ್ರೀವೇಷಗಳನ್ನು ಸಹ ಧರಿಸಿ ನರ್ತಿಸುತ್ತಾರೆ. ಗರುಡ ವೇಷಧಾರಿಗೆ ಮೈ ಮೇಲೆ ದೇವರ ಆವಾಹನೆಯಾಗುತ್ತದೆ ಎಂಬ ನಂಬಿಕೆಯಿದ್ದು, ನಿಯಂತ್ರಿಸಲು ಸೊಂಟಕ್ಕೆ ಹಗ್ಗ ಕಟ್ಟಿ ಕಟ್ಟುಮಸ್ತಾದ ವ್ಯಕ್ತಿಯೋರ್ವ ಹಿಡಿದುಕೊಂಡಿರುತ್ತಾನೆ.
ಸಂಜೆ ೭ರ ಸುಮಾರಿಗೆ ಊರಗೌಡನ (ಬೂದೇ ಗೌಡ) ಮನೆಯ ಅಂಗಳದ ತುಳಸಿ ಕಟ್ಟೆಗೆ ವಿಧಿವತ್ತಾಗಿ ಪೂಜೆ ಸಲ್ಲಿಸಿದ ನಂತರ ಈ ತಂಡದ ಕಲಾವಿದರು ಪ್ರಸಾದ ಸ್ವೀಕರಿಸಿ ಗ್ರಾಮದ ಉಮಾಮಹೇಶ್ವರ (ಮಕ್ಕಿ ) ದೇವಸ್ಥಾನ ಮತ್ತು ಲಕ್ಷ್ಮೀನಾರಾಯಣ (ಹಿರೇ) ದೇವಸ್ಥಾನಗಳಲ್ಲಿ ದೇವರಿಗೆ ಪೂಜೆ ಸಲ್ಲಿಸಿ ಪ್ರಸಾದ ಪಡೆದು ಸುತ್ತಮುತ್ತಲ ಗ್ರಾಮಗಳ ಮನೆ ಮನೆಗೆ ಗರುಡ ಕುಣಿತ ಪ್ರದರ್ಶಿಸುತ್ತಾ ಸಾಗುತ್ತಾರೆ. ಜಾಗಟೆ, ಡೋಲುಗಳ ಹಿಮ್ಮೇಳದೊಂದಿಗೆ ಜಾನಪದ ಗೀತೆಗಳನ್ನು ಹಾಡುತ್ತಾ ಕುಣಿತ ಸಾಗುತ್ತದೆ.
ಈ ರೀತಿ ಗರುಡ ವೇಷ ತಮ್ಮ ಮನೆಗಳ ಜಗುಲಿಗೆ ಬಂದರೆ ಮನೆಯೊಳಗಿನ ದುಷ್ಟಶಕ್ತಿ ನಿವಾರಣೆಯಾಗಿ ಒಳಿತಾಗುತ್ತದೆ, ಮಹಾವಿಷ್ಣುವಿನ ಅನುಗ್ರಹ ದೊರೆಯುತ್ತದೆ ಎಂಬುದು ಗ್ರಾಮಸ್ಥರ ನಂಬಿಕೆ. ಮನೆಗೆ ಆಗಮಿಸಿದ ಈ ತಂಡಕ್ಕೆ ಹಣ, ತೆಂಗಿನಕಾಯಿಗಳನ್ನು ಕಾಣಿಕೆ ನೀಡುತ್ತಾರೆ. ಕೆಲ ಮನೆಗಳಲ್ಲಿ ಈ ತಂಡದ ಸದಸ್ಯರಿಗೆ ಚಹಾ, ಕಾಫಿ, ತಿಂಡಿಗಳನ್ನು ನೀಡಿ ಸತ್ಕರಿಸುತ್ತಾರೆ.
ಹೊಸಾಕುಳಿ, ಮೂಡಾರೆ, ಗುಡ್ಡೆಬಾಳು, ಗೋಳಿಬೈಲು, ಹೆಬ್ಬತ್ತಕೇರಿ, ಗುಮ್ಮೇಕೇರಿ, ಕೆಲ್ಲಂಗೆರೆ, ಬೊಮ್ಮಹೊಂಡ, ಹಿರೇಮಕ್ಕಿ, ಸಂತೆಗುಳಿ, ಆರೊಳ್ಳಿ ಹೀಗೆ ಸುತ್ತಮುತ್ತಲ ಸುಮಾರು ೨ರಿಂದ ೩ ಕಿ.ಮೀ. ವ್ಯಾಪ್ತಿಯ ೨೫೦ಕ್ಕೂ ಅಧಿಕ ಮನೆಗಳಿಗೆ ಭೇಟಿ ನೀಡಿದ ಈ ಗರುಡ ವೇಷದ ತಂಡ ಸೂರ್ಯೋದಯದ ಒಳಗೆ ಊರಗೌಡನ ಮನೆ (ಬೂದೇಗೌಡನ ಮನೆ)ಗೆ ಹಿಂತಿರುಗುತ್ತದೆ. ಸೂರ್ಯೋದಯದ ನಂತರ ಕುಣಿತ ನಿಷಿದ್ಧ.
ಬಲಿ ಪಾಡ್ಯಮಿ ಮರುದಿನ ಅರ್ಥಾತ್ ಇಂದು, ಊರಗೌಡನ ಮನೆಯಲ್ಲಿ ಸೇರುವ ಈ ಕಲಾವಿದರು ಗ್ರಾಮದ ತಮ್ಮ ಜನಾಂಗದ ಜನರೊಂದಿಗೆ ಗರುಡ ವೇಷದ ಮುಖವಾಡ ಮತ್ತು ಬಟ್ಟೆಗೆ ಸಾಮೂಹಿಕ ಪೂಜೆ ಸಲ್ಲಿಸಿ ಭೋಜನ ನಡೆಸುತ್ತಾರೆ. ಕುಣಿತದ ಪ್ರದರ್ಶನಕ್ಕೆ ಕಾಣಿಕೆಯಾಗಿ ಸ್ವೀಕರಿಸಿದ ಹಣದಿಂದ ಒಣ ಮೆಣಸು, ಬೆಲ್ಲ, ಅವಲಕ್ಕಿ ಇತ್ಯಾದಿ ಆಹಾರ ಸಾಮಗ್ರಿ ಖರೀದಿಸಿ ಪಾಲು ಹಂಚಿಕೊಳ್ಳುತ್ತಾರೆ. (ಹಣ ಪಾಲು ಹಂಚಿಕೊಳ್ಳುವುದು ಇವರಲ್ಲಿ ನಿಷಿದ್ಧ) ಸಂಭಾವನೆಯಾಗಿ ಬಂದ ತೆಂಗಿನಕಾಯಿಗಳು ಸಹ ಪಾಲು ಹಂಚಿಕೆಯಾಗುತ್ತದೆ.
ಇದು ಹಲವು ಶತಮಾನಗಳಿಂದ ನಡೆದು ಬಂದ ಜಾನಪದ ಕಲೆಯಾಗಿದ್ದು, ದೀಪಾವಳಿಯ ಈ ಸುಂದರ ಬೆಳಕಿನ ಕ್ಷಣಗಳಲ್ಲಿ ಇಂತಹ ಜಾನಪದ ಆಚರಣೆಯು ಮನೆಮಂದಿಗೆಲ್ಲ ಸಂತಸ ನೀಡುತ್ತದೆ.
ವರ್ಷಕ್ಕೊಮ್ಮೆ ಬಲಿಪಾಡ್ಯಮಿ ಸಂದರ್ಭದಲ್ಲಿ ಮಾತ್ರ ಪ್ರದರ್ಶನಗೊಳ್ಳುವ ಈ ಕಲೆಯ ಅಂದ ಸವಿಯಲು ಈ ದೀಪಾವಳಿ ಬಿಟ್ಟರೆ ಮುಂದಿನ ವರ್ಷದ ಬಲಿಪಾಡ್ಯಮಿವರೆಗೆ ಕಾಯಬೇಕು.