ಗಾನ ಕೋಗಿಲೆ ಎಸ್ ಜಾನಕಿ ತಮ್ಮ ಸುದೀರ್ಘ ಗಾಯನ ಪಯಣಕ್ಕೆ ಇದೇ ತಿಂಗಳು ವಿದಾಯ ಹೇಳಲಿದ್ದಾರೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಇದೇ ತಿಂಗಳ 28 ರಂದು ವಿಶ್ವವಿದ್ಯಾನಿಲಯದ ಬಯಲು ರಂಗಮಂದಿರದಲ್ಲಿ ನಡೆಯಲಿರುವ ಗಾಯನ ಕಾರ್ಯಕ್ರಮವೇ ಅವರ ಅಂತಿಮ ಸಾರ್ವಜನಿಕ ಗಾಯನ ಕಾರ್ಯಕ್ರಮವಾಗಲಿದೆ ಎಂದು ಹೇಳಿಕೊಂಡಿದ್ದಾರೆ ಜಾನಕಿ.

ವಿಶೇಷವೆಂದರೆ, ತಮ್ಮ ಜೀವಮಾನದ ಮೊದಲ ಸಾರ್ವಜನಿಕ ಗಾಯನವನ್ನು ಮೈಸೂರಿನಿಂದಲೇ ಆರಂಭಿಸಿದ್ದರು. ಇದೀಗ 65 ವರ್ಷಗಳ ನಂತರ ತಮ್ಮ ಕಡೆಯ ಕಾರ್ಯಕ್ರಮ ಕೂಡ ಮೈಸೂರಿನಲ್ಲೇ ನಡೆಸಿಕೊಡಲಿದ್ದಾರೆ. 1952ರಲ್ಲಿ ಅಂದಿನ ಪ್ರಖ್ಯಾತ ಸಂಗೀತ ನಿರ್ದೇಶಕ ಜಿ ಕೆ ವೆಂಕಟೇಶ್ ಅವರು ಆಯೋಜಿಸಿದ್ದ ಸಂಗೀತ ಕಾರ್ಯಕ್ರಮದಲ್ಲಿ ಜಾನಕಿ ಅವರು ಮೊದಲ ಬಾರಿಗೆ ಹಾಡಿದ್ದರು.

RELATED ARTICLES  ಗಣೇಶ ಹಬ್ಬಕ್ಕಾಗಿ 500 ಹೆಚ್ಚುವರಿ ಬಸ್..!

ಕಳೆದ ವರ್ಷವಷ್ಟೇ ತಮ್ಮ ಸಿನಿಮಾ ಗಾಯನ ಜೀವನದಿಂದ ನಿವೃತ್ತಿ ಘೋಷಿಸಿದ್ದರು. ಕಳೆದ ವರ್ಷ ಬಿಡುಗಡೆಯಾದ ಮಲಯಾಳಂ ಭಾಷೆಯ ‘ಪತು ಕಲ್ಪನಾಕಳ್’ ಚಿತ್ರದ ‘ಅಮ್ಮಾಪೂವಿನುಂ’ ಹಾಡೇ ಜಾನಕಿ ಗಾಯನದ ಕೊನೆಯ ಸಿನಿಮಾ ಹಾಡಾಗಿತ್ತು.

RELATED ARTICLES  ಮಹಿಳೆಗೆ ಕರೆ ಮಾಡಿ ಪೀಡಿಸುತ್ತಿದ್ದ ಕಾಮುಕನಿಗೆ ಹಿಗ್ಗಾಮುಗ್ಗಾ ಗೂಸಾ (ವಿಡಿಯೋ)

ಕಾರ್ಯಕ್ರಮದ ಬಗ್ಗೆ ವಿವರಣೆ ನೀಡಿರುವ ಆಯೋಜಕರು ಮೈಸೂರಿನಲ್ಲಿ ಅವರಿಂದ ಒಂದು ಕಾರ್ಯಕ್ರಮ ಮಾಡಿಸಬೇಕೆಂದು ಸುಮಾರು 10-15 ವರ್ಷಗಳಿಂದ ಅಂದುಕೊಂಡಿದ್ದೆವು. ಕಾರಣಾಂತರಗಳಿಂದ ಅದು ಸಾಧ್ಯವಾಗಿರಲಿಲ್ಲ ಈಗ ಅದು ನೆರವೇರುತ್ತಿದೆ. ಗಾಯನದ ವೇದಿಕೆಯಲ್ಲಿ ಜಾನಕಿ ಅವರನ್ನು ಸನ್ಮಾನಿಸಲು ತೀರ್ಮಾನಿಸಲಾಗಿದೆ. ರಾಜಮಾತೆ ಪ್ರಮೋದಾದೇವಿ ಅವರು ಸನ್ಮಾನ ಪ್ರದಾನ ಮಾಡಲಿದ್ದಾರೆಂದು ತಿಳಿಸಿದರು.