ಬೆಂಗಳೂರು: ಟಿಪ್ಪು ಜಯಂತಿ ವಿಚಾರದಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಹಾಗೂ ಪ್ರತಿಪಕ್ಷ ಬಿಜೆಪಿ ನಡುವಿನ ರಾಜಕೀಯ ವಿವಾದ ತೀವ್ರ ಸ್ವರೂಪ ಪಡೆಯುತ್ತಿದೆ. ಕಳೆದ ಎರಡು ವರ್ಷಗಳಿಂದ ವಿವಾದದ ಛಾಯೆಯಡಿಯಲ್ಲಿಯೇ ನಡೆಯುತ್ತಿರುವ ಟಿಪ್ಪು ಜಯಂತಿ ಈ ಬಾರಿಯೂ ಅದ ಕ್ಕೆ ಹೊರತಾಗಿಲ್ಲ.

ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಬೆನ್ನಲ್ಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹಾಗೂ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಕೂಡ ಅದೇ ದಾರಿ ತುಳಿದಿದ್ದಾರೆ.

ಈ ಮಧ್ಯೆ ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಹಾಕದಂತೆ ಸೂಚಿಸಿದ್ದ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಅವರು ಟ್ವೀಟ್‌ ಮೂಲಕವೂ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಸರ್ಕಾರದ ಮುಖ್ಯ ಕಾರ್ಯದರ್ಶಿಯವರ ಆಪ್ತ ಕಾರ್ಯದರ್ಶಿಗೆ ತಾವು ಬರೆದಿದ್ದ ಪತ್ರವನ್ನು ಟ್ವಿಟರ್‌ನಲ್ಲಿ ಹಾಕಿರುವ ಅವರು, ಒಬ್ಬ ಮತಾಂಧ, ಕ್ರೂರ ಕೊಲೆಗಾರ, ಸಾಮೂಹಿಕ ಅತ್ಯಾಚಾರ ಎಂದು ಕರೆಯಲ್ಪಡುವ ವ್ಯಕ್ತಿಯನ್ನು ವೈಭವೀಕರಿಸುವ ಕಾರ್ಯಕ್ರಮಕ್ಕೆ ತಮ್ಮನ್ನು ಆಹ್ವಾನಿಸಬೇಡಿ ಎಂದು ಹೇಳಿರುವ ಅವರು, ತಮ್ಮ ಟ್ವೀಟ್‌ಅನ್ನು ರಾಜ್ಯ ಸರ್ಕಾರದ ಟ್ವಿಟರ್‌ಗೆ ಟ್ಯಾಗ್‌ ಮಾಡಿದ್ದಾರೆ.

RELATED ARTICLES  ರಾಮ ಜನ್ಮಭೂಮಿ ಬಳಿ 8 ಮಂದಿ ಬಂಧನ!

ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.” ಕೇಂದ್ರ ಸಚಿವರು ಇತಿಹಾಸ ತಿಳಿದುಕೊಂಡು ಮಾತನಾಡಬೇಕು’ಎಂದು ಮುಖ್ಯಮಂತ್ರಿ ಕುಟುಕಿದ್ದಾರೆ. “ಅನಂತ್‌ ಕುಮಾರ್‌ ಹೆಗಡೆ ಅವ ರಂಥ ಅಪ್ರಬುದ್ಧರ ಬಗ್ಗೆ ಮಾತನಾಡುವುದೇ ವ್ಯರ್ಥ.ಎಲ್ಲ ಧರ್ಮೀಯರನ್ನು ಜತೆಯಾಗಿ ಕರೆದು ಕೊಂಡ ಹೋಗಲಾಗದ ಸಚಿವರು ರಾಜೀನಾಮೆ ನೀಡುವುದು ಲೇಸು ಎಂದು ದೇವೇಗೌಡರು ಕಿಡಿಕಾರಿದ್ದಾರೆ.

ಈ ನಾಡು ಕಂಡ ಮತಾಂಧ ವ್ಯಕ್ತಿ ಟಿಪ್ಪುವಿನ ಜಯಂತಿ ಆಚರಣೆ ಆಮಂತ್ರಣ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದ್ದೇ ಆದರೆ ಅದೇ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಟಿಪ್ಪುವಿನ ಇತಿಹಾಸ ಜಾಲಾಡಿ ಬರುತ್ತೇನೆ. ತಾಕತ್ತಿದ್ದರೆ ಹೆಸರು ಹಾಕಲಿ.
– ಅನಂತಕುಮಾರ ಹೆಗಡೆ, ಕೇಂದ್ರ ಕೌಶಲಾಭಿವೃದ್ಧಿ ಸಚಿವ

ಟಿಪ್ಪು ಸುಲ್ತಾನ್‌ ಕನ್ನಡ ವಿರೋಧಿ ಮತ್ತು ಹಿಂದೂ ವಿರೋಧಿ. ಹೀಗಾಗಿ ಆತನ ಜನ್ಮದಿನದ ಆಹ್ವಾನ ಪತ್ರಿಕೆಯಲ್ಲಿ ತಮ್ಮ ಹೆಸರು ಬಳಸದಂತೆ ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದ್ದೇನೆ.
– ಶೋಭಾ ಕರಂದ್ಲಾಜೆ, ಸಂಸದೆ

ಕೆಟ್ಟ ಕೆಲಸಗಳಿಂದಲೇ ಇತಿಹಾಸದಲ್ಲಿ ದಾಖಲಾಗಿರುವ ಟಿಪ್ಪು ಜಯಂತಿಗೆ ಬಿಜೆಪಿಯ ವಿರೋಧ ಇದೆ. ಈ ಬಾರಿ ಟಿಪ್ಪು ಜಯಂತಿ ಆಚರಣೆ ನಿಲ್ಲಿಸಲು ಬಿಜೆಪಿ ಯುವ ಮೋರ್ಚಾದಿಂದ ಹೋರಾಟ ನಡೆಸುತ್ತೇವೆ. ಟಿಪ್ಪು ಆಚರಣೆ ಸಂಬಂಧ ಕೇಂದ್ರ ಸಚಿವ ಅನಂತಕುಮಾರ್‌ ಹೆಗಡೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಅವರ ನಿಲುವಿಗೆ ನನ್ನ ಸಹಮತ ಇದೆ.
– ಪ್ರತಾಪ್‌ ಸಿಂಹ, ಸಂಸದ

RELATED ARTICLES  ದಿನಾಂಕ 03/06/2019ರ ದಿನ ಭವಿಷ್ಯ ಇಲ್ಲಿದೆ.

ಟಿಪ್ಪು ಜಯಂತಿ ಕಾರ್ಯಕ್ರಮದ ಆಹ್ವಾನ ಪತ್ರಿಕೆಯಲ್ಲಿ ಕೇಂದ್ರ ಸಚಿವ ಅನಂತ್‌ಕುಮಾರ ಹೆಗಡೆ ಹೆಸರನ್ನು ನಮೂದಿಸುವುದು ಸರ್ಕಾರದ ಶಿಷ್ಟಾಚಾರ. ಬರುವುದು ಬಿಡುವುದು ಅವರಿಗೆ ಬಿಟ್ಟ ವಿಚಾರ. ಕೇಂದ್ರ ಸಚಿವರಾಗಿ ಕಾರ್ಯಕ್ರಮಕ್ಕೆ ಬರಬೇಕು. ಆದರೆ, ಬರಲೇಬೇಕೆಂದು ಹೇಳಲು ಸಾಧ್ಯವಿಲ್ಲ. ಬಿಜೆಪಿಯವರು ಟಿಪ್ಪು ಸುಲ್ತಾನ್‌ ಇತಿಹಾಸ ಓದಿಕೊಂಡು ಮಾತನಾಡಲಿ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಅನಂತ್‌ಕುಮಾರ್‌ ಹೆಗಡೆ ಅನೇಕ ಬಾರಿ ತಾವು ಇಸ್ಲಾಂ ಧರ್ಮವನ್ನು ವಿರೋಧಿಸಿಕೊಂಡೇ ಬಂದಿರುವುದಾಗಿ ಹೇಳಿದ್ದಾರೆ. ಮಂತ್ರಿ ಸ್ಥಾನ ಪಡೆಯುವ ವೇಳೆ ಎಲ್ಲಾ ಜಾತಿ, ಧರ್ಮೀಯರ ಬಗ್ಗೆ ವಿಶ್ವಾಸ ಇರಿಸಿಕೊಳ್ಳುವ ಬಗ್ಗೆ ಪ್ರಮಾಣ ಸ್ವೀಕರಿಸಿ ನಂತರ ಹೀಗೆ ಮಾತನಾಡೋರನ್ನು ಸಚಿವ ಸ್ಥಾನದಿಂದ ಹೊರಹಾಕಬೇಕು. ಮುಸ್ಲಿಮರನ್ನು ಬಿಡುವುದು ಈ ದೇಶದಲ್ಲಿ ಅಷ್ಟು ಸುಲಭವಲ್ಲ. 35 ಕೋಟಿ ಮುಸ್ಲಿಂರನ್ನು ಓಡಿಸೋಕೆ ಸಾಧ್ಯವೇ?
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ


ಟಿಪ್ಪು ಜಯಂತಿ ಆಚರಣೆ ರಾಜ್ಯ ಸರ್ಕಾರದ ತೀರ್ಮಾನ. ಅದನ್ನು ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ. ಯಾರಿಂದಲೂ ತಡೆಯಲೂ ಸಾಧ್ಯವಿಲ್ಲ.
– ತನ್ವೀರ್‌ ಸೇಠ್ ಶಿಕ್ಷಣ ಸಚಿವ