ಉತ್ತರ ಕನ್ನಡ : ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಸಂಬಂಧ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ನಡುವೆ ಜಿದ್ದಾಜಿದ್ದಿನ ವಾರ್ ಶುರುವಾಗಿದೆ. ಟಿಪ್ಪು ಜಯಂತಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕುವುದು ಬೇಡ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದರೆ, ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ ಶಿಷ್ಟಾಚಾರಕ್ಕಾಗಿ ಅವರ ಹೆಸರು ಹಾಕುತ್ತೇವೆ ಎಂದಿದ್ದಾರೆ.
ಸಿಎಂ ಹೇಳಿಕೆಗೆ ಪ್ರತಿಕ್ರಿಯಿಸಿರುವ ಅನಂತ್ ಕುಮಾರ್ ಹೆಗಡೆ, ಟಿಪ್ಪು ಜಯಂತಿ ಆಚರಣೆಯ ಆಹ್ವಾನ ಪತ್ರಿಕೆಯಲ್ಲಿ ನನ್ನ ಹೆಸರು ಹಾಕಿದರೆ ಅದೇ ಕಾರ್ಯಕ್ರಮಕ್ಕೆ ಬಂದು ಟಿಪ್ಪುವಿನ ನಿಜ ಜೀವನದ ಇತಿಹಾಸವನ್ನು ಜಾಲಾಡಿ ಬರುತ್ತೇನೆ ಎಂದು ಎಚ್ಚರಿಕೆ ನೀಡಿದ್ದಾರೆ.
ಶನಿವಾರ ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪತ್ರಿಕೆಯಲ್ಲಿ ನನ್ನ ಹೆಸರು ಹಾಕದಂತೆ ಮೊದಲೇ ತಿಳಿಸಿದ್ದೇನೆ. ನಾನೇ ಈ ವಿಚಾರವನ್ನು ಹೇಳಿರುವಾಗ ಅದು ಶಿಷ್ಟಾಚಾರದ ಉಲ್ಲಂಘನೆಯಾಗುವುದಿಲ್ಲ. ಇಷ್ಟಾದರೂ ಸಿಎಂ ಹಠಮಾರಿ ಬುದ್ದಿ ತೋರಿ ಹೆಸರು ಪ್ರಕಟಿಸಿದರೆ, ಅದೇ ಕಾರ್ಯಕ್ರಮದ ವೇದಿಕೆಯಲ್ಲಿ ಟಿಪ್ಪುವಿನ ಅಸಲಿಯತ್ತನ್ನು ಬಿಚ್ಚಿಡುತ್ತೇನೆ ಎಂದಿದ್ದಾರೆ.