ಶಿರಸಿ: ಲೋಕಸಭಾ ಸದಸ್ಯರ ಹಾಗೂ ವಿಧಾನ ಪರಿಷತ್ ಸದಸ್ಯರ ಸ್ಥಳೀಯ ಪ್ರದೇಶಾಭೀವೃದ್ಧಿ ಯೋಜನೆ ಅನುದಾನದಡಿಯಲ್ಲಿ ಮಂಜೂರಾದ ಇಲ್ಲಿನ ಜಿಲ್ಲಾ ಕಾರ್ಯಕನಿರತ ಪತ್ರಕರ್ತರ ಸಂಘದ ಪತ್ರಿಕಾ ಭವನದ ಮುಂದುವರೆದ ಕಾಮಗಾರಿಯನ್ನು ಸಂಸದ ಹಾಗೂ ಕೇಂದ್ರ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯಮಶೀಲತೆ ರಾಜ್ಯ ಸಚಿವ ಅನಂತಕುಮಾರ ಹೆಗಡೆ ಉದ್ಘಾಟನೆ ಮಾಡಿದರು. ಇಲ್ಲಿನ ಪತ್ರಿಕಾ ಭವನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಸಚಿವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಪತ್ರಕರ್ತರ ಸಂಘದ ವತಿಯಿಂದ ಸಚಿವರಿಗೆ ಮಾಲಾರ್ಪಣೆ ಮಾಡಿ, ಗೌರವ ಸಲ್ಲಿಸಿದರು. ಗೌರವ ಸ್ವೀಕರಿಸಿ ಮಾತನಾಡಿದ ಸಚಿವ ಅನಂತಕುಮಾರ ಹೆಗಡೆ ಹೊಸದಾಗಿ ಪತ್ರಕರ್ತರಾಗಿ ಬರುವ ಯುವಕರಿಗೆ ಕೌಶಲ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಪಾಸಿಟಿವ್ ಪತ್ರಿಕೋದ್ಯಮ, ಪೋಟೋಗ್ರಾಫಿ, ವರದಿ ಮಾಡುವುದು, ಪ್ರಶ್ನೆ ಕೇಳವುದು, ಸಂದರ್ಶನ ನಡೆಸುವುದು ಹೀಗೆ ಎಲ್ಲದರ ಕುರಿತು ಮಾಹಿತಿ ನೀಡುವ ಕಾರ್ಯಾಗಾರವನ್ನು ಮುಂದಿನ ದಿನಗಳಲ್ಲಿ ಹಮ್ಮಿಕೊಳ್ಳಬಹುದಾಗಿದೆ. ಇದಕ್ಕೆ ಪತ್ರಿಕಾ ಸಂಘದ ಸಹಕಾರವೂ ಸಹ ಅಗತ್ಯವಿದೆ ಎಂದ ಅವರು , ಪತ್ರಿಕಾ ಭವನದ ಮುಂದಿನ ಬೆಳವಣಿಗೆಗೆ ಶುಭಕೋರಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ವಿಶ್ವೇಶ್ವರ ಹೆಗಡೆ ಮಾತನಾಡಿ ಪತ್ರಿಕೋದ್ಯಮಕ್ಕೆ ಶಿರಸಿಯಲ್ಲಿ ಒಳ್ಳೆಯ ಹೆಸರಿದೆ. ಒಳ್ಳೆಯ ಚಟುವಟಿಕೆಗಳೂ ನಡೆಯುತ್ತಿದೆ. ಅಲ್ಲದೇ ಉತ್ತಮ ಚಟುವಟಿಕೆ ನಡೆದಾಗ ಮಾತ್ರ ಉತ್ತಮ ಹೆಸರು ಬರುತ್ತದೆ. ಇಲ್ಲಿ ಇದು ಹೀಗೆ ಮುಂದುವರೆದು ಪತ್ರಿಕಾ ಭನವದಲ್ಲಿ ಮಾಹಿತಿ ಪುಸ್ತಕಗಳು ದೊರೆತು ಜ್ಞಾನದ ಭವನವಾಗಿ ನಿರ್ಮಾಣವಾಗಬೇಕು ಎಂದು ಆಶಿಸಿ, ಆ ನಿಟ್ಟಿನಲ್ಲಿ ಬೇಕಾಗುವ ಎಲ್ಲಾ ಸಹಕಾರವನ್ನೂ ಸಹ ನಾವು ನೀಡಲು ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು. ಈ ಮೊದಲು ಪ್ರಾಸ್ತಾವಿಕ ಮಾತುಗಳನ್ನಾಡಿದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಾಯ ಭಟ್ ಬಕ್ಕಳ್ ಸಂಘವು ಕಳೆದ ೪೩ ವರ್ಷಗಳಿಂದ ಅತ್ಯುತ್ತಮವಾಗಿ ಕೆಲಸ ಮಾಡಿಕೊಂಡು ಬರುತ್ತಿದೆ. ರಾಜ್ಯದಲ್ಲಿಯೇ ೪ ಗುಂಟೆ ಜಾಗವನ್ನು ಹೊಂದಿ ಉತ್ತಮ ವ್ಯವಸ್ಥೆ ಹೊಂದಿರುವ ಏಕೈಕ ಸಂಘ ನಮ್ಮ ಉತ್ತರ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವಾಗಿದೆ. ದಾನಿಗಳ, ಜನಪ್ರತಿನಿಧಿಗಳ ಸಹಾಯದಿಂದ ಕಟ್ಟಡ ನಿರ್ಮಾಣ ಮಾಡಲಾಗಿದೆ. ಇಲ್ಲಿ ಇನ್ನೂ ಹಲವಾರು ಅಭಿವೃದ್ಧಿ ನಡೆಯಬೇಕಿದ್ದು ಹೆಚ್ಚಿನ ಅನುದಾನವನ್ನೂ ಸಹ ನಿರೀಕ್ಷೆ ಮಾಡಲಾಗಿದೆ. ಒಟ್ಟಾರೆಯಾಗಿ ಸಂಘದ ಏಳ್ಗೆಗಾಗಿ ಶ್ರಮಿಸಿದ ಎಲ್ಲರಿಗೂ ಸಹ ಧನ್ಯವಾದಗಳು ಎಂದು ಸಂಘದ ಹಿನ್ನೆಲೆ ಹಾಗೂ ಆಶೋತ್ತರಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ತಾ.ಪಂ. ಅಧ್ಯಕ್ಷೆ ಶ್ರೀಲತಾ ಕಾಳೇರಮನೆ, ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಪ್ರದೀಪ ಶೆಟ್ಟಿ ಇದ್ದರು. ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ನರಸಿಂಹ ಅಡಿ ವಂದಿಸಿದರು.