ಶಿರಸಿ: ದೇಹವನ್ನು ಪರೋಪಕಾರಕ್ಕೆ ವಿನಿಯೋಗಿಸಬೇಕು. ಅದರಲ್ಲಿಯೂ ಕಣ್ಣು ಮಹತ್ವದ ಅಂಗವಾಗಿದ್ದು, ಅದರ ದಾನ ಶ್ರೇಷ್ಠದಾನ ಎಂದು ಸ್ವರ್ಣವಲ್ಲೀ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು. ಅವರು ಇಲ್ಲಿನ ನಯನ ಸಭಾಂಗಣದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಜಿಲ್ಲೆಯ ಮೊದಲ ” ಲಯನ್ಸ್ ನೇತ್ರ ಭಂಡಾರ ” ವನ್ನು ಉದ್ಘಾಟಿಸಿ ಮಾತನಾಡಿದರು.
ದೇವರು ನಮಗೆ ನೀಡಿದ್ದನ್ನು ಸಾಧ್ಯವಾದಷ್ಟು ದಾನ ಮಾಡಬೇಕು. ಪರೋಪಕಾರ ಅತ್ಯಂತ ಪುಣ್ಯದ ಕೆಲಸವಾಗಿದೆ. ಉಪಕಾರಕ್ಕೆ ನಮ್ಮ ಶರೀರವನ್ನು ವಿನಿಯೋಗಿಸಬೇಕು. ಅದು ಅತ್ಯಂತ ಶ್ರೇಷ್ಠ ಸಂಗತಿಯಾಗಿದೆ. ಅದರಲ್ಲಿ ಉಳಿದೆಲ್ಲ ಅಂಗಗಳಿಗಿಂತ ಕಣ್ಣು ಶ್ರೇಷ್ಠ ಅಂಗವಾಗಿದೆ. ಅದನ್ನು ನಾವು ದಾನ ಮಾಡಬೇಕು. ಅದರಿಂದ ಅಂಧತ್ವ ನಿವಾರಣೆ ಸಾಧ್ಯ ಎಂದ ಶ್ರೀಗಳು, ನೇತ್ರ ಭಂಡಾರದ ಜಾಗೃತಿ ಪ್ರತಿ ಹಳ್ಳಿ ಯಲ್ಲಿಯೂ ಆಗಬೇಕು. ಎಲ್ಲರೂ ನೇತ್ರದಾನ ಮಾಡಲು ಮುಂದೆಬರುವಂತಾಬೇಕು ಎಂದು ಆಶಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ಖಾಸಗಿ ಮತ್ತು ಸರ್ಕಾರಿ ಎಂದು ಆಸ್ಪತ್ರೆಗಳು ಹೊಡೆದಾಡಿಕೊಳ್ಳುತ್ತಿರುವಾಗ ಶಿರಸಿಯಲ್ಲಿ ಎಲ್ಲರೂ ಒಂದಾಗಿ ಕೆಲಸ ಮಾಡಿಕೊಂಡು ಹೋಗುತ್ತಿರುವುದು ಮಾದರಿಯಾಗಿದೆ. ಇಂತಹ ಸಂದರ್ಭದಲ್ಲಿ ಜಿಲ್ಲೆಯಲ್ಲಿಯೇ ಮೊದಲ ನೇತ್ರ ಭಂಡಾರ ಇಲ್ಲಿ ಪ್ರಾರಂಭವಾಗುತ್ತಿರುವುದು ನಮಗೆ ಮತ್ತೊಂದು ಗರಿಯಾಗಿದೆ. ಎಲ್ಲರೂ ಸೇರಿ ಉತ್ತಮ ಸೇವೆ ನೀಡುತ್ತಿದ್ದಾರೆ. ಆದ್ದರಿಂದ ನೇತ್ರ ಭಂಡಾರದಿಂದ ಹೆಚ್ಚಿನ ಜನರಿಗೆ ಅನುಕೂಲವಾಗಲಿದೆ ಎಂದರು.
ಸಭೆಯಲ್ಲಿ ಡಾ.ರವೀಂದ್ರ ಕೊಳ್ವೇಕರ್ ಉಪಸ್ಥಿತರಿದ್ದ ಪ್ರತಿಯೊಬ್ಬರಿಗೂ ನೇತ್ರದಾನ ಪ್ರತಿಜ್ಞೆ ಭೋಧಿಸಿದರು. ನೇತ್ರ ಭಂಡಾರದ ಮೂಲ ರೂವಾರಿಯಾದ ಡಾ.ಶಿವರಾಮ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಲ.ಸಾಯೀಶ್ ಪ್ರಭು ಲಾವಂಡೆ, ಡಾ.ಸತ್ಯಮೂರ್ತಿ ಮುಂತಾದವರು ಇದ್ದರು. ಲ.ಜ್ಯೋತಿ ಭಟ್ ಸ್ವಾಗತಿಸಿದರು. ವೈದ್ಯ ರೊ.ಡಾ.ಕೃಷ್ಣಮೂರ್ತಿ ರಾಯ್ಸದ್ ಹಾಗೂ ಲ.ವಿನಾಯಕ ಭಟ್ ನಿರೂಪಿಸಿದರು. ಡಾ.ವಿಶ್ವನಾಥ ಅಂಕದ್ ವಂದಿಸಿದರು.