ಕುಮಟಾ: ಪಟ್ಟಣದ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಂತಿರುವ ಸುಮಾರು ಎರಡು ಎಕರೆಯಷ್ಟು ವಿಸ್ತೀರ್ಣದ ಕಿತ್ತೂರು ಚೆನ್ನಮ್ಮ ಉದ್ಯಾನಕ್ಕೆ ಸರ್ಕಾರಿ ನೌಕರರು ಶುಚಿಗೊಳಿಸುವ ಮೂಲಕ, ಹೊಸ ರೂಪ ಕೊಟ್ಟಿದ್ದಾರೆ.ವಿವಿಧ ಇಲಾಖೆಗಳ ನೌಕರರು ಹರಿಸಿದ ಬೆವರಿನಿಂದಾಗಿ, ಗಿಡಗಂಟಿ ಬೆಳೆದು ಪಾಳು ಬಿದ್ದಿದ್ದ ಉದ್ಯಾನವೀಗ ವಾಯುವಿಹಾರಕ್ಕೆ ಪ್ರಶಸ್ತ ಸ್ಥಳವಾಗಿ ಮಾರ್ಪಟ್ಟಿದೆ.

ಉದ್ಯಾನವನದ ಒಂದು ಭಾಗದಲ್ಲಿ ಕೆಲ ವರ್ಷಗಳ ಹಿಂದೆ ಆರಂಭವಾಗಿದ್ದ ಪುರಭವನ ಕಟ್ಟಡ ಕಾಮಗಾರಿ ಇತ್ತೀಚೆಗೆ ಪೂರ್ಣಗೊಂಡು ಉದ್ಘಾಟನೆಗೊಂಡಿದೆ. ಆದರೆ, ನಿತ್ಯ ನೂರಾರು ಮಂದಿ ಬಂದು ಹೋಗುವ ಈ ಕಟ್ಟಡಕ್ಕೆ ಹೊಂದಿಕೊಂಡಂತಿದ್ದ ಉದ್ಯಾನ ಮಾತ್ರ ಶುಚಿತ್ವದಿಂದ ಹೊರತಾಗಿತ್ತು. ಇತ್ತೀಚೆಗೆ ನಡೆದ ಸ್ವಚ್ಛತಾ ಸಪ್ತಾಹ ಸಂದರ್ಭದಲ್ಲಿ ಹಿಂದಿನ ಉಪವಿಭಾಗಾಧಿಕಾರಿ ರಮೇಶ ಕಳಸದ ನೇತೃತ್ವದಲ್ಲಿ ಉದ್ಯಾನ ಶುಚಿತ್ವ ಕಾರ್ಯಕ್ಕೆ ಚಾಲನೆ ಸಿಕ್ಕಿತು.

RELATED ARTICLES  ಯಶಸ್ವಿಯಾಯ್ತು ಕಣ್ಣಿನ ತಪಾಸಣೆ ಹಾಗೂ ಎಲುಬು ಮತ್ತು ಕೀಲು ರೋಗಿಗಳ ತಪಾಸಣೆ ಶಿಬಿರ.

ಎಲ್ಲಾ ಇಲಾಖೆಗಳ ಸುಮಾರು 200 ನೌಕರರು ಒಂದು ವಾರ ಬೆಳ್ಳಿಗ್ಗೆ 7ರಿಂದ 9 ಗಂಟೆಯವರೆಗೆ ಉದ್ಯಾನದಲ್ಲಿ ಸ್ವಚ್ಛತಾ ಕಾರ್ಯ ಕೈಗೊಂಡಿದ್ದರ ಫಲವಾಗಿ, ಉದ್ಯಾನಕ್ಕೆ ಹೊಸ ಮೆರಗು ಬಂತು.

‘ಇದಕ್ಕೂ ಮುಂಚೆ ಉದ್ಯಾನವದೊಳಗೆ ಪ್ರವೇಶಿಸಿದರೆ ಪಕ್ಕದಲ್ಲಿರುವ ಪುರಭವನ ಕಟ್ಟಡ ಕೂಡ ಕಾಣದಷ್ಟು ಎತ್ತರವಾಗಿ, ಗಿಡಗಂಟಿಗಳು ಬೆಳೆದಿದ್ದವು. ಉದ್ಯಾನದಲ್ಲಿ ಕೀಳಲಾಗಿರುವ ಗಿಡಗಂಟಿಗಳನ್ನು ಉದ್ಯಾನವನದ ಒಂದು ಮೂಲೆಯಲ್ಲಿ ಹಾಕಿ ಗೊಬ್ಬರ ತಯಾರಿಸಿ, ಮತ್ತೆ ಗಿಡಗಳಿಗೆ ಗೊಬ್ಬರವಾಗಿ ಬಳಸುವ ವ್ಯವಸ್ಥೆ ಕೂಡ ಮಾಡಲಾಗಿದೆ’ ಎಂದು ಪುರಸಭೆಯ ನೌಕರರೊಬ್ಬರು ತಿಳಿಸಿದರು.

ಸ್ವಚ್ಛತಾ ಕಾರ್ಯದ ಬಗ್ಗೆ ಮಾಹಿತಿ ನೀಡಿದ ಪುರಸಭೆ ಪರಿಸರ ಎಂಜಿನಿಯರ್ ನಾಗೇಂದ್ರ ಗಾಂವ್ಕರ್, ‘ಕಿತ್ತೂರು ಚೆನ್ನಮ್ಮ ಉದ್ಯಾನವನ ಹೊರತಾಗಿ ಪಟ್ಟಣದ ವಿವೇಕರನಗರದ ಉದ್ಯಾನವನ, ಚಿತ್ರಿಗಿ ಹಾಗೂ ಕೃಷಿ ಉತ್ಪನ್ನ ಮಾರುಕಟ್ಟೆ ಬಳಿಯ ಸ್ಮಶಾನವನ್ನು ಸಹ ಶುಚಿಗೊಳಿಸಲಾಗಿದೆ’ ಎಂದರು.

RELATED ARTICLES  ಕಾರ್ಯಕ್ರಮದಲ್ಲಿ ತಲೆಸುತ್ತು ಬಂದು ಪ್ರಜ್ಞೆ ತಪ್ಪಿದ ಉತ್ತರ ಕನ್ನಡ ಜಿಲ್ಲಾಧಿಕಾರಿಗಳು

‘ನಮ್ಮ ಕೆಲಸ ನೋಡಿ ಪುರಸಭೆ ವ್ಯಾಯಾಮ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಹೆದ್ದಾರಿ ಬದಿಯಲ್ಲಿ ಸ್ವಚ್ಛತಾ ಕಾರ್ಯ ನಡೆಸುವ ಮೂಲಕ ಸಾರ್ವಜನಿಕರ ಗಮನ ಸೆಳೆದಿದ್ದಾರೆ’ ಎಂದು ಹೇಳಿದರು.

ಉದ್ಯಾನದ ಅಭಿವೃದ್ಧಿಗೆ ಹಣ ಬಿಡುಗಡೆಯಾಗಿದ್ದು ಅದರಲ್ಲಿ ಮಕ್ಕಳ ಮನರಂಜನೆಗೆ ಆಟೋಪಕರಣ, ತೆರೆದ ಜಿಮ್ ಹಾಗೂ ಫಲಪುಷ್ಪ ಅಭಿವೃದ್ಧಿ ಕೆಲಸಕ್ಕೆ ವ್ಯಯಿಸಲಾಗುವುದು. ಉದ್ಯಾನವನ ಪ್ರವೇಶಕ್ಕೆ ನಿರ್ದಿಷ್ಟ ಶುಲ್ಕ ವಿಧಿಸುವ ಮೂಲಕ ಶಿಸ್ತು ಮತ್ತು ಶುಚಿತ್ವಕ್ಕೆ ಆದ್ಯತೆತೆ ನೀಡಲಾಗುವುದು’ ಎಂದು ತಿಳಿಸಿದರು.