ಮೈಸೂರು: ನಗರದ ಕರ್ನಾಟಕ ರಾಜ್ಯ ಡಾ.ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾನಿಲಯ ಸ್ವಂತ ಕಟ್ಟಡ ಹೊಂದಲಿದ್ದು, ಅದು ವೀಣೆ ಆಕಾರದಲ್ಲಿರುತ್ತದೆ.

ಮೈಸೂರಿನ ರಿಂಗ್‌ ರಸ್ತೆ ಬಳಿಯ ಹಂಚ್ಯಾ–ಸಾತಗಳ್ಳಿ ಹತ್ತಿರ 8 ಎಕರೆ ಜಮೀನಿನಲ್ಲಿ ನೂತನ ಕಟ್ಟಡ ನಿರ್ಮಾಣಗೊಳ್ಳಲಿದೆ.
ವೀಣೆಗೆ ಬುರುಡೆ ಹಾಗೂ ಕೊಡ ಆಕಾರಗಳು ಮುಖ್ಯ. ಇದಕ್ಕಾಗಿ ಬುರುಡೆಯಾಕಾರದ ಕಟ್ಟಡದಲ್ಲಿ ಆಡಳಿತಾಂಗ ವಿಭಾಗ ಹಾಗೂ ಕೊಡದ ಆಕಾರದಲ್ಲಿ ವಿದ್ಯಾರ್ಥಿಗಳಿಗೆ ತರಗತಿ ಕೋಣೆಗಳು, ದೊಡ್ಡ ಸಭಾಂಗಣ ನಿರ್ಮಾಣಗೊಳ್ಳಲಿದೆ. ನಂತರ ಗ್ರಂಥಾಲಯ, ವಿದ್ಯಾರ್ಥಿನಿಲಯಗಳು, ಅತಿಥಿಗೃಹ, ಪಾರ್ಕಿಂಗ್, ಆಟದ ಮೈದಾನ, ಬಯಲು ರಂಗಮಂದಿರ, ಉದ್ಯಾನ, ಉದ್ಯಾನದೊಳಗೆ ಅಲ್ಲಲ್ಲಿ ಕುಳಿತು ನಿಸರ್ಗದೊಂದಿಗೆ ವಿದ್ಯಾರ್ಥಿಗಳು ಸಂಗೀತದ ತಾಲೀಮು ನಡೆಸಲು ಅನುಕೂಲವಾಗುವಂಥ ಆಸನಗಳು, ಆಡಿಯೊ–ವಿಡಿಯೊ ಒಳಗೊಂಡ ಸ್ಟುಡಿಯೊ, ಸಂಶೋಧನ ಕೇಂದ್ರ, ಪ್ರಸಾರಾಂಗ, ಉಪಾಹಾರಗೃಹ, ಬ್ಯಾಂಕ್‌, ಅಂಚೆಕಚೇರಿ… ಹೀಗೆ ಒಟ್ಟು 5 ಅಂತಸ್ತುಗಳಲ್ಲಿ ಕಟ್ಟಡ ಸಿದ್ಧಗೊಳ್ಳಲಿದೆ.

ಕಟ್ಟಡ ಪ್ರವೇಶದ್ವಾರವು ತಂಬೂರಿ ಆಕಾರದಲ್ಲಿರುತ್ತದೆ. ನಂತರ ಡಾ.ಗಂಗೂಬಾಯಿ ಹಾನಗಲ್ ಪ್ರತಿಮೆ ಪ್ರತಿಷ್ಠಾಪನೆಗೊಳ್ಳಲಿದೆ. ಇದರೊಂದಿಗೆ ಸೋಲಾರ್‌ ಅಳವಡಿಸುವುದರ ಜತೆಗೆ, ಮಳೆನೀರು ಸಂಗ್ರಹಿಸುವ ಯೋಜನೆಯಿದೆ.

ಇದಕ್ಕಾಗಿ ವಿ.ವಿಯಲ್ಲಿ ಉಳಿಸಿಕೊಂಡಿರುವ ₹ 12 ಕೋಟಿ, ಉನ್ನತ ಶಿಕ್ಷಣ ಇಲಾಖೆ ನೀಡಿರುವ ₹ 15 ಕೋಟಿ ವಿನಿಯೋಗವಾಗಲಿದೆ. ವಿ.ವಿ ನೂತನ ಕಟ್ಟಡದ ವಿನ್ಯಾಸ ನೋಡಿದ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ₹ 15 ಕೋಟಿಯಲ್ಲದೆ, ಮತ್ತೆ ₹ 5 ಕೋಟಿ ನೀಡಲು ಮುಂದಾಗಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 05-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? 

ಒಟ್ಟು 3 ಹಂತಗಳಲ್ಲಿ ಕಟ್ಟಡ ನಿರ್ಮಾಣಗೊಳ್ಳಲಿದೆ. ಮೊದಲ ಹಂತದಲ್ಲಿ ₹ 12 ಕೋಟಿ, ಎರಡನೇ ಹಂತದಲ್ಲಿ ₹ 20 ಕೋಟಿ ಹಾಗೂ ಮೂರನೇ ಹಂತದಲ್ಲಿ ₹ 25.47 ಕೋಟಿ ವ್ಯಯಿಸಲಾಗುವುದು. ಒಟ್ಟು ₹ 57.47 ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಿಸುವ ಗುರಿಯನ್ನು ವಿ.ವಿ ಹೊಂದಿದೆ.

‘ವೀಣೆ ಆಕಾರದಲ್ಲಿ ಸಂಗೀತ ವಿ.ವಿ ಕಟ್ಟಡ ಇರಬೇಕು ಎನ್ನುವುದು ನನ್ನ ಕನಸಿನ ಕೂಸು. ಕೆಳಗಿನಿಂದ ಮೇಲಿನವರೆಗೆ ಕಟ್ಟಡ ವೀಣೆಯ ಆಕಾರದಲ್ಲಿರುತ್ತದೆ. ಹೀಗೆ ವಾದ್ಯದ ಆಕಾರದಲ್ಲಿ ಕಟ್ಟಡವಿರುವ ಮೊದಲ ವಿ.ವಿ ನಮ್ಮದಾಗಲಿದೆ’ ಎಂದು ಸಂಗೀತ ವಿ.ವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್‌ ‘ಪ್ರಜಾವಾಣಿ’ಗೆ ತಿಳಿಸಿದರು.
ನಗರದ ಲಕ್ಷ್ಮಿಪುರಂನಲ್ಲಿರುವ, ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಕಟ್ಟಡದಲ್ಲಿ ಸಂಗೀತ ವಿ.ವಿ ಕಾರ್ಯೋನ್ಮುಖವಾಗಿದೆ. ಅಲ್ಲಿ ಪ್ರಾಥಮಿಕ ಶಾಲೆಯಿತ್ತು. ಇದು ಸುಣ್ಣ–ಬಣ್ಣ ಕಂಡಿದ್ದು, ₹ 10 ಲಕ್ಷ ವೆಚ್ಚದ ಜನರೇಟರ್‌ ಒಳಗೊಂಡಿದೆ. ಕಾಂಪಾಂಡ್ ಹಾಕಲಾಗಿದ್ದು, ಗೇಟ್‌ ಅಳವಡಿಸಲಾಗಿದೆ. ಒಟ್ಟು ₹ 35 ಲಕ್ಷ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇದನ್ನೂ ವಿ.ವಿಗೇ ಉಳಿಸಿಕೊಳ್ಳುವ ಯೋಜನೆ ಕುಲಪತಿಗಿದೆ.‌

‘ನೂತನ ಕಟ್ಟಡ ನಿರ್ಮಾಣಗೊಂಡ ನಂತರ ಇದು ಆಡಳಿತ ಸೌಧವಾಗಲಿದೆ. ಜತೆಗೆ, ಜೂನಿಯರ್‌ ಹಾಗೂ ಸೀನಿಯರ್‌ ವಿದ್ವತ್‌ ಪರೀಕ್ಷೆ, ಪ್ರದರ್ಶಕ ಕಲೆಗಳ ದೂರಶಿಕ್ಷಣ ಕೇಂದ್ರವಾಗಿ ಉಳಿಸಿಕೊಳ್ಳುವ ಉದ್ದೇಶವಿದೆ’ ಎಂದು ಕುಲಪತಿ ಹೇಳಿದರು.

RELATED ARTICLES  ಕೃಷಿ ಸಂಬಂಧಿತ ವಸ್ತುಗಳನ್ನು ಖರೀದಿಸಲು ವಿನಾಯಿತಿ ನೀಡಬೇಕೆಂದು ಮನವಿ ಸಲ್ಲಿಸಿದ ಭಾಸ್ಕರ ಪಟಗಾರ

ಇದರೊಂದಿಗೆ ಹುಣಸೂರು ಹತ್ತಿರದ ಧರ್ಮಾಪುರಂ ಗ್ರಾಮದ ಬಳಿ 65 ಎಕರೆಯನ್ನು ಸಂಗೀತ ವಿ.ವಿಗೆ ನೀಡಲಾಗಿದ್ದು, ಅಲ್ಲಿ ಪ್ರದರ್ಶಕ ಕಲೆಗಳ ಗುರುಕುಲ ಅಧ್ಯಯನ ಕೇಂದ್ರ ಅಭಿವೃದ್ಧಿಯಾಗಲಿದೆ. ಕರ್ನಾಟಕ, ಹಿಂದೂಸ್ತಾನಿ ಸಂಗೀತ, ಭರತನಾಟ್ಯ ಹಾಗೂ ಮಂಗಳವಾದ್ಯವನ್ನು ಗುರುಕುಲ ಪದ್ಧತಿಯಲ್ಲಿ ಕಲಿಸಲಾಗುವುದು. ಜತೆಗೆ, ಸಂಗೀತ ಉಪಕರಣಗಳ ಮ್ಯೂಸಿಯಂ, ಪ್ರವಾಸಿಗರನ್ನು ಸೆಳೆಯುವ ಸಂಗೀತ ಕಾರಂಜಿಯನ್ನೂ ಅಳವಡಿಸಲಾಗುವುದು.

ಕೆಎಸ್‌ಒಯುಗೆ ಮನವಿ
ಮೈಸೂರು: ‘ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ (ಕೆಎಸ್‌ಒಯು) ಒಂದು ಕಟ್ಟಡವನ್ನು ತಾತ್ಕಾಲಿಕವಾಗಿ ಸಂಗೀತ ವಿ.ವಿಗೆ ಕೊಡಲು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರನ್ನು ಕೇಳಿದ್ದೇವೆ. ಒಪ್ಪಿಗೆ ಕೊಟ್ಟಿದ್ದಾರೆ’ ಎಂದು ಸಂಗೀತ ವಿ.ವಿ ಕುಲಪತಿ ಡಾ.ಸರ್ವಮಂಗಳಾ ಶಂಕರ್ ತಿಳಿಸಿದರು.

‘ಈ ಸಂಬಂಧ ಕೆಎಸ್‌ಒಯು ಕುಲಪತಿ ಡಾ.ಡಿ.ಶಿವಲಿಂಗಯ್ಯ ಅವರೊಂದಿಗೆ ಮಾತುಕತೆಯಾಡಲು ಸಚಿವರು ತಿಳಿಸಿದ್ದಾರೆ. ಸದ್ಯದಲ್ಲೇ ಚರ್ಚಿಸಲಾಗುವುದು’ ಎಂದು ಹೇಳಿದರು.

* ಹೊಸ ಕಟ್ಟಡ ವಿನ್ಯಾಸವನ್ನು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರಿಗೆ ತೋರಿಸಿದಾಗ ಖುಷಿಪಟ್ಟಿದ್ದಾರೆ. ಆಡಳಿತಾತ್ಮಕ ಅನಮೋದನೆ ದೊರಕಿದ ಶೀಘ್ರ ಶಂಕುಸ್ಥಾಪನೆ ನೆರವೇರಿಸಲಾಗುವುದು.