ಬೆಂಗಳೂರು: ರಸ್ತೆ ಅಪಘಾತಗಳಲ್ಲಿ ಹಿಂಬದಿ ಸವಾರರೇ ಹೆಚ್ಚಾಗಿ ಮೃತಪಡುತ್ತಿರುವುದು ಗಾಯಗೊಳ್ಳುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ದ್ವಿಚಕ್ರ ವಾಹನಗಳಲ್ಲಿ ಇಬ್ಬರು ಪ್ರಯಾಣಿಸುವುದನ್ನು ನಿರ್ಬಂಧಿಸಲು ಮುಂದಾಗಿದೆ.
ಕೆಲ ದಿನಗಳಿಂದ ನಗರದಲ್ಲಿ ನಡೆದ ಅಪಘಾತಗಳ ಕುರಿತು ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದಿರುವ ಸರ್ಕಾರ, ಈ ಅಪಘಾತಗಳಲ್ಲಿ ಹಿಂಬದಿಯ ಸವಾರರೇ ಹೆಚ್ಚು ಮೃತಪಟ್ಟಿರುವುದನ್ನು ಗಂಭೀರವಾಗಿ ಪರಿಗಣಿಸಿ ದ್ವಿಚಕ್ರ ವಾಹನಗಳಲ್ಲಿ ಪ್ರಮುಖವಾಗಿ 100 ಸಿಸಿ ಸಾಮರ್ಥ್ಯದ ದ್ವಿಚಕ್ರ ವಾಹನಗಳಿಗೆ ಅನ್ವಯವಾಗುವಂತೆ ಹಿಂಬದಿ ಸವಾರರ ನಿಷೇಧ ಮಾಡಲು ನಿರ್ಧರಿಸಿದೆ.
ದ್ವಿಚಕ್ರ ವಾಹನಗಳ ಹಿಂಬದಿಯಲ್ಲಿ ಕುಳಿತು ಪ್ರಯಾಣಿಸುತ್ತಿದ್ದ ಮಹಿಳೆಯರು ಹಾಗೂ ಮಕ್ಕಳು ಹೆಚ್ಚು ಮೃತಪಟ್ಟಿರುವ ಪ್ರಕರಣಗಳೇ ನಡೆದಿರುವ ಹಿನ್ನೆಲೆಯಲ್ಲಿ ಈ ನೂತನ ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ಈ ಕುರಿತಂತೆ ರಾಜ್ಯಸರ್ಕಾರ ಈಗಾಗಲೇ ಉಚ್ಛನ್ಯಾಯಾಲಯಕ್ಕೆ ಪ್ರಮಾಣಪತ್ರವನ್ನು ಸಲ್ಲಿಸಿರುವ ಹಿನ್ನೆಲೆಯಲ್ಲಿ 1 ವಾರದೊಳಗೆ ಈ ಸಂಬಂಧ ನ್ಯಾಯಾಲಯದಿಂದ ಅಧಿಕೃತ ಆದೇಶ ಹೊರಬೀಳುವ ಸಂಭವವಿದೆ.
ನಗರ ವ್ಯಾಪ್ತಿಯಲ್ಲಿ ಪ್ರತಿ ಬಾರಿಯೂ ನಡೆದ ಅಪಘಾತದಲ್ಲಿ ಹಿಂಬದಿಯ ಸವಾರರೇ ಹೆಚ್ಚು ಮೃತಪಟ್ಟಿರುವುದನ್ನು ಗಮನಿಸಿರುವ ಸಾರಿಗೆ ಇಲಾಖೆ, ಇಂತಹ ಸಾವು-ನೋವುಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಿಂಬದಿಯ ಸವಾರರು ದ್ವಿಚಕ್ರ ವಾಹನಗಳಲ್ಲಿ ಪ್ರಯಾಣಿಸದಂತೆ ನಿರ್ಬಂಧ ಹೇರಲು ಮುಂದಾಗಿದೆ.
ಈ ಸಂಬಂಧ ದ್ವಿಚಕ್ರ ತಯಾರಕಾ ಕಂಪನಿಗಳಿಗೆ ಆದೇಶ ನೀಡುವ ಮೂಲಕ ದ್ವಿಚಕ್ರ ವಾಹನಗಳಲ್ಲಿ ಸವಾರ ಮಾತ್ರ ಪ್ರಯಾಣಿಸುವಂತೆ ಸೀಟಿನ ವ್ಯವಸ್ಥೆಯನ್ನು ನಿರ್ಮಿಸುವಂತೆ ಸೂಚಿಸಲಿದೆ. ಈಗಾಗಲೇ ಮೋಟಾರ್ ವಾಹನ ಕಾಯ್ದೆಯ ಉಪಬಂಧದಲ್ಲಿ 100 ಸಿಸಿ ವಾಹನಗಳಲ್ಲಿ ಹಿಂಬದಿಯ ಸವಾರರಿಗೆ ಸವಾರಿ ಮಾಡಲು ಅವಕಾಶವಿಲ್ಲ ಎನ್ನುವ ನಿಯಮವಿದ್ದರೂ ಭಾರತೀಯ ರಸ್ತೆ ಕಾಂಗ್ರೆಸ್ ಸಾರಿಗೆ ಇಲಾಖೆಗೆ ಮಾಡಿದ್ದ ಮನವಿ ಪರಿಗಣಿಸಿ ದ್ವಿಚಕ್ರ ವಾಹನಗಳಲ್ಲಿ ಹಿಂಬದಿಯ ಸವಾರರಿಗೆ ಪ್ರಯಾಣಿಸಲು ಅವಕಾಶ ನೀಡಲಾಗಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಅಪಘಾತ ಸಂದರ್ಭದಲ್ಲಿ ಹಿಂಬದಿಯ ಸವಾರರ ಸಾವು ಪ್ರಕರಣಗಳು ಹೆಚ್ತುತ್ತಿರುವ ಹಿನ್ನೆಲೆ, ಹಿಂಬದಿ ಸವಾರರ ಪ್ರಯಾಣ ನಿರ್ಬಂಧಿಸಿ ನಿಯಮ ಜಾರಿಗೆ ತರಲಾಗುವುದು ಎಂದು ಸಾರಿಗೆ ಆಯುಕ್ತ ದಯಾನಂದ್ ಮಾಹಿತಿ ನೀಡಿದ್ದಾರೆ.