ಪೆರ್ಲ : ಬಜಕೂಡ್ಲು ಅಮೃತಧಾರಾ ಗೋಶಾಲೆಯ `ಸಾಕೇತ’ ಮಂಟಪದಲ್ಲಿ ಆರಂಭಗೊಂಡ ಶ್ರೀಮದ್ವಾಲ್ಮೀಕಿ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪರ್ಯಾ-ಗೋಪಾಷ್ಟಮೀ ಮಹೋತ್ಸವದ 3ನೇ ದಿನ ಭಾನುವಾರ ವಿವಿಧ ವೈದಿಕ ಕಾರ್ಯಕ್ರಮಗಳು ನೆರವೇರಿದವು. ಪ್ರಾತಃಕಾಲ ಕಲಶಪೂಜೆ, ಶ್ರೀರಾಮಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಸಂಜೆ ಶ್ರೀರಾಮ ದೇವರಿಗೆ ಪ್ರದೋಷ ಪೂಜೆ, ಗೋಪಾಲಕೃಷ್ಣ ಪೂಜೆ, ವಿಷ್ಣುಸಹಸ್ರನಾಮ ಪಾರಾಯಣ, ಗೋಪೂಜೆ, ತುಲಸೀಪೂಜೆ, ರಾತ್ರಿ ದೀಪೋತ್ಸವ ವಿಜೃಂಭಣೆಯಿಂದ ನಡೆಯಿತು. ಮೊದಲ ದಿನ ಸಂಜೆ ಗೋಶಾಲೆಯಲ್ಲಿ ದೈವಗಳಿಗೆ ತಂಬಿಲ ಸೇವೆ ನೆರವೇರಿತು.
ಎರಡನೆಯ ದಿನ ನೀರ್ಚಾಲು ವಲಯ, 3ನೇ ದಿನ ಪೆರಡಾಲ ವಲಯದ ವತಿಯಿಂದ ಸೇವೆ ನಡೆಯಿತು. ಸೋಮವಾರ ಗುಂಪೆ ಹಾಗೂ ಈಶ್ವರ ಮಂಗಲ ವಲಯದ ಜಂಟಿ ಸೇವೆ ನಡೆಯಲಿದೆ.
ರಾಮಾಯಣ ಪಾರಾಯಣ ಮಂಟಪಕ್ಕೆ ಶ್ರೀ ಗುರುಗಳಿಂದ ಅನುಗ್ರಹಿತ ಮಂತ್ರಾಕ್ಷತೆ ಹಾಗೂ ಶ್ರೀರಾಮ ಪೂಜೆಯ ಗಂಧಪ್ರಸಾದವನ್ನು ಭಕ್ತಿಪೂರ್ವಕವಾಗಿ ಗುರುವಂದನೆಯನ್ನು ನೆರವೇರಿಸಿ ಸ್ವೀಕರಿಸಲಾಯಿತು. ಈ ಸಂದರ್ಭದಲ್ಲಿ ವಾಲ್ಮೀಕಿ ರಾಮಾಯಣ ಪುಸ್ತಕಗಳು, ಮಿತ್ತೂರು ಸಂಪ್ರತಿಷ್ಠಾನದ ಪುಸ್ತಕಗಳು, ಗವ್ಯೋತ್ಪನ್ನಗಳು, ವಿವಿಧ ರೀತಿಯ ಗೃಹೋತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆಯನ್ನು ಅಮೃತಧಾರಾ ಗೋಶಾಲೆಯ ಕಾರ್ಯಾಲಯದಲ್ಲಿ ಏರ್ಪಡಿಸಲಾಗಿದೆ. ವೇದಮೂರ್ತಿ ದರ್ಭೆ ಮಹಾಬಲ ಭಟ್ಟರಿಂದ ವಿಶೇಷ ಗೋಸೇವೆ ನಡೆಯಿತು. ವೇದಮೂರ್ತಿ ಪಳ್ಳತ್ತಡ್ಕ ಪರಮೇಶ್ವರ ಭಟ್ಟರು ಮಂಟಪಕ್ಕೆ ಭೇಟಿಯಿತ್ತು ಮೆಚ್ಚುಗೆಯನ್ನು ಸೂಚಿಸಿದ್ದರು.
2ನೇ ದಿನ ರಾಮಾಯಣದ ಅಯೋಧ್ಯಾಕಾಂಡದ 60ನೇ ಸರ್ಗದ ವರೆಗೆ ಪಾರಾಯಣ ನಡೆಸಲಾಗಿತ್ತು. ಶ್ರೀರಾಮ ಸೀತಾದೇವಿಯವರು ವಿವಾಹವಾಗಿ ಅಯೋಧ್ಯೆಗೆ ಬರುವುದರಿಂದ ಆರಂಭಿಸಿ ಶ್ರೀರಾಮ ವನವಾಸಕ್ಕೆ ಹೋದ ನಂತರ ದುಃಖ ಪಡುತ್ತಿರುವ ಕೌಸಲ್ಯೆಗೆ ಮಂತ್ರಿಯಾದ ಸುಮಂತ್ರನಿಂದ ಸಮಾಧಾನ ಪಡಿಸುವಲ್ಲಿಗೆ ಎರಡನೇ ದಿನದ ಪಾರಾಯಣ ತಲುಪಿತ್ತು.
3ನೇ ದಿನ ಅಯೋಧ್ಯಾ ಕಾಂಡದ 61ನೇ ಸರ್ಗದಿಂದ 119ನೇ ಸರ್ಗದ ವರೆಗೆ ಪಾರಾಯಣದಲ್ಲಿ ಕೌಸಲ್ಯೆ ದಶರಥರ ಸಂಭಾಷಣೆಯಿಂದ ಆರಂಭಿಸಿ ರಾಮ ವನಸಂಚಾರದಿಂದ ದಂಡಕಾರಣ್ಯ ಪ್ರವೇಶದೊಂದಿಗೆ ಅಯೋಧ್ಯಾ ಕಾಂಡ ಮುಕ್ತಾಯವಾಯಿತು.
ಸೋಮವಾರದಿಂದ ಅರಣ್ಯ ಕಾಂಡ ಪ್ರಾರಂಭವಾಗಲಿದೆ.
ವಿಶೇಷತೆಗಳು :
* ಪ್ರತೀದಿನ ಸಾವಯವ ತರಕಾರಿಗಳಿಂದ ತಯಾರಿಸಿದ ಭೋಜನ ವ್ಯವಸ್ಥೆ
* ಹಲವಾರು ಜನರಿಂದ ಭಕ್ತಿಪುರಸ್ಸರವಾಗಿ ರಾಮಾಯಣ ಪ್ರಾಯೋಜಕತ್ವ
* ದಿನನಿತ್ಯ ಕಲ್ಪೋಕ್ತ ಪೂಜೆ, ಗೋಪೂಜೆ ಮುಂತಾದ ಸೇವೆಗಳು
* ಜಪ ಮಾಡಿದ `ಗೋರಾಮ ರಕ್ಷೆ’-ಅಪೇಕ್ಷಿತ ಭಕ್ತರಿಗೆ ಧರಿಸುವ ಅವಕಾಶ
* ದೇಶೀ ಹಸುವಿನ ಹಾಲು, ಮೊಸರು, ತುಪ್ಪ, ಭೆರಣಿಯನ್ನು ಉಪಯೋಗಿಸಿ ಧಾರ್ಮಿಕ ಕಾರ್ಯಕ್ರಮಗಳು
* ಶುದ್ಧ ದೇಶೀಯ ಹಸುವಿನ ಗೋಮಯದಿಂದ ಆಕರ್ಷಕ ರೀತಿಯ ಗೋವರ್ಧನಗಿರಿ
* ಮುಳ್ಳೇರಿಯ ಹವ್ಯಕ ಮಂಡಲದ 12 ವಲಯದ ಸಂಕೇತವಾಗಿ 12 ವಿದ್ವಾಂಸರಿಂದ ಪಾರಾಯಣ
* ರಾಮಾಯಣ ಪಾರಾಯಣ ಸಂದರ್ಭದಲ್ಲಿ ರಾಮಾಯಣವನ್ನು ಆಲಿಸುವುದಕ್ಕೆ ಹನುಮನಿಗಾಗಿ ವಿಶೇಷ ಸಂಕಲ್ಪದಿಂದ ಕುಳಿತುಕೊಳ್ಳಲು ಹನುಮಂತನಿಗಾಗಿ ವಿಶೇಷ ಪೀಠದ ವ್ಯವಸ್ಥೆ.