ಹೆಚ್ಚಿನ ಸಂಸ್ಕೃತಿಗಳು, ಪುರಾತನ ಪರಂಪರೆ ಹಾಗೂ ಪ್ರಭಾವಶಾಲಿ ಕಲೆ ಮೊದಲಾದವು ರಷ್ಯಾದೇಶವನ್ನು ವಿಶ್ವದ ಒಂದು ಕುತೂಹಲಕಾರಿ ದೇಶವನ್ನಾಗಿಸಿವೆ. ಇಲ್ಲಿನ ಸಂಸ್ಕೃತಿ, ಸಂಗೀತ, ವಾಸ್ತುಶಿಲ್ಪ ಹಾಗೂ ಪರಂಪರಾಗತವಾಗಿ ಬಂದಿರುವ ಧಾರ್ಮಿಕ ಹಾಗೂ ಇತರ ಆಚರಣೆಗಳು ವಿಶ್ವದ ಇತರ ಜನರಿಗೆ ಕುತೂಹಲಕಾರಿಯಾಗಿ ಕಂಡುಬರುತ್ತವೆ. ಕೆಲವು ವಿಷಯಗಳು ಇತರರಿಗೆ ಅನಾಕರ್ಷಣೀಯವಾಗಿದ್ದರೂ ಪರಂಪರಾಗತವಾಗಿ ರಷ್ಯನ್ನರು ಇಂದಿಗೂ ಅನುಸರಿಸಿಕೊಂಡು ಬರುತ್ತಿದ್ದಾರೆ.
ಜಗತ್ತಿನ ಜನವಸತಿ ಇರುವ ಅತಿ ವಿಶಾಲ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆರುವ ರಷ್ಯಾ ಇಂದಿಗೂ ತನ್ನ ಪಾರಂಪರಿಕ ಹಾಗೂ ಸಾಂಸ್ಕೃತಿಕ ಆಚರಣೆಯನ್ನು ಉಳಿಸಿಕೊಂಡು ಬಂದಿದೆ. ಆಶ್ಚರ್ಯವೆಂದರೆ ಈ ಸಂಪ್ರದಾಯಗಳು ಅಕ್ಕ ಪಕ್ಕದ ಅಥವಾ ವಿಶ್ವದ ಇತರ ಯಾವುದೇ ರಾಷ್ಟ್ರದ ಸಂಪ್ರದಾಯಕ್ಕೆ ಸರಿಸಮನಾಗಿ ಅಥವಾ ಹೋಲಿಕೆಯನ್ನು ಹೊಂದಿಲ್ಲ. ಅದರಲೂ ಕೆಲವು ವಿಚಿತ್ರ ಸಂಪ್ರದಾಯಗಳು ಇವರ ಪರಂಪರೆಯ ಅವಿಭಾಜ್ಯ ಅಂಗಗಳಾಗಿದ್ದು ಇವನ್ನು ಬದಲಿಸಲು ಅಥವಾ ತ್ಯಜಿಸಲು ರಷ್ಯನ್ನರು ಸಿದ್ಧರಿಲ್ಲ. ಅಷ್ಟೇ ಅಲ್ಲ, ತಮ್ಮ ರಾಷ್ಟ್ರಕ್ಕೆ ಆಗಮಿಸಿದ ಅತಿಥಿಗಳೂ ಈ ಸಂಪ್ರದಾಯಗಳನ್ನು ಅನುಸರಿಸಬೇಕು ಎಂದು ಇವರು ಬಯಸುತ್ತಾರೆ. ಬನ್ನಿ, ನಿಮಗೆ ಆಘಾತ ನೀಡಬಹುದದ ಕೆಲವು ವಿಚಿತ್ರ ಸಂಪ್ರದಾಯಗಳಲ್ಲಿ ಪ್ರಮುಖವಾದವುಗಳನ್ನು ನೋಡೋಣ…
ಕನ್ನಡಿ ಒಡೆಯುವುದು ಸಲ್ಲದು
ರಷ್ಯಾದಲ್ಲಿ ಕನ್ನಡಿ ಒಡೆಯುವುದು ಸಲ್ಲದು. ಕನ್ನಡಿ ಒಡೆಯುವುದೆಂದರೆ ದುರಾದೃಷ್ಟಕ್ಕೆ ಆಹ್ವಾನ ಎಂದೇ ರಷ್ಯನ್ನರು ನಂಬುತ್ತಾರೆ. ಕನ್ನಡಿ ನಿಮ್ಮ ಪ್ರತಿಬಿಂಬವನ್ನು ತೋರುವುದರಿಂದ ಇದನ್ನು ಒಡೆದಾಗ ಪ್ರತಿಬಿಂಬವೂ ಒಡೆಯುತ್ತದೆ ಹಾಗೂ ಇದು ದುರಾದೃಷ್ಟಕರ ಎಂದು ಭಾವಿಸಲಾಗುತ್ತದೆ. ಅಷ್ಟೇ ಅಲ್ಲ, ಒಡೆದ ಕನ್ನಡಿಯಿಂದ ಎದುರಾಗುವ ದುರಾದೃಷ್ಟ ಏಳು ವರ್ಷಗಳವರೆಗೆ ಕಾಡುತ್ತದೆ.
ಹಣದ ಪರ್ಸ್ ಒಂದನ್ನು ಹಣದೊಂದಿಗೇ ನೀಡುವುದು
ಉಡುಗೊರೆಯಾಗಿ ಹಣದ ಪರ್ಸ್ ಒಂದನ್ನು ನೀಡಬಯಸಿದರೆ ಇದನ್ನು ಖಾಲಿಯಾಗಿ ನೀಡಬಾರದು ಎಂದು ಇಲ್ಲಿನ ಕಟ್ಟಳೆಯಾಗಿದೆ. ಬದಲಿಗೆ ಇದರಲ್ಲಿ ಕೊಂಚ ಹಣವನ್ನಿರಿಸಿ ನೀಡಬೇಕು. ಇದು ರಷ್ಯಾದ ಪುರಾತನ ಸಂಪ್ರದಾಯವಾಗಿದ್ದು ಖಾಲಿ ಪರ್ಸ್ ನೀಡುವುದು ದುರಾದೃಷ್ಟಕ್ಕೆ ಆಹ್ವಾನ ಎಂದು ಪರಿಗಣಿಸಲಾಗುತ್ತದೆ.
ನವಜಾತ ಮಗುವನ್ನು ಅಪರಿಚಿತರಿಗೆ ತೋರಿಸುವಂತಿಲ್ಲ
ಮಗುವಿನ ಜನನದ ಬಳಿಕ ತಾಯಿಯಾದವಳು ತನ್ನ ಮಗುವನ್ನು ಅಪರಿಚಿತರು ನೋಡುವುದರಿಂದ ರಕ್ಷಿಸುವುದು ಆಕೆಯ ಕರ್ತ್ಯವ್ಯವಾಗಿರುತ್ತದೆ. ಅಪರಿಚಿತರು ಮಗುವನ್ನು ದಿಟ್ಟಿಸಿ ನೋಡುವುದನ್ನು ರಷ್ಯಾದಲ್ಲಿ ಕೇಡು ಬಗೆಯುವ ರೂಪದಲ್ಲಿ ಕಾಣಲಾಗುತ್ತದೆ. ಮಗುವನ್ನು ತನ್ನ ಪತಿ ಹಾಗೂ ಆಪ್ತರಾದ ಸಂಬಂಧಿಗಳಿಗೆ ಮಾತ್ರ ತೋರಿಸಲು ತಾಯಿಗೆ ಅವಕಾಶವಿದೆ. ಹೀಗೆ ಮುಂದಿನ ನಲವತ್ತು ದಿನಗಳವರೆಗೆ ಮಗುವನ್ನು ಹೊರಗಿನರು ಯಾರೂ ನೋಡದಂತೆ ಆಕೆ ಕಟ್ಟೆಚ್ಚರ ವಹಿಸಬೇಕಾಗುತ್ತದೆ.
ಮೊಲ ಅಡ್ಡ ಹಾದುಹೋಗುವುದು
ಭಾರತದಲ್ಲಿ ದಾರಿದಡ್ಡವಾಗಿ ಬೆಕ್ಕು ಹಾದು ಹೋದರೆ ಕೆಲಹೆಜ್ಜೆ ಹಿಂದೆ ಹೋಗಿ ಮತ್ತೆ ಮುಂದೆ ಹೋಗುವ ಸಂಪ್ರದಾಯವಿದೆ. ರಷ್ಯಾದಲ್ಲಿಯೂ ಹೆಚ್ಚೂ ಕಡಿಮೆ ಇದೇ ತರಹರ ಸಂಪ್ರದಾಯವಿದೆ. ಇಲ್ಲಿ ಬೆಕ್ಕಿನ ಬದಲು ಮೊಲ ಅಥವಾ ಬರ್ಕ ಎಂಬ ಜಾತಿಯ ಪ್ರಾಣಿಗಳು ದಾರಿಯನ್ನು ದಾಟುವುದನ್ನು ಅಶುಭಕರ ಎಂದು ಪರಿಗಣಿಸಲಾಗುತ್ತದೆ.
ಸತ್ಯದ ಪರಿಶೀಲನೆ
ಎದುರಿನವನು ಹೇಳುತ್ತಿರುವ ಮಾತುಗಳು ಸತ್ಯವೇ? ಇವನನ್ನು ನಂಬುವುದು ಹೇಗೆ? ಈ ಪ್ರಶ್ನೆಗೆ ರಷ್ಯನ್ನರ ಬಳಿ ಪುರಾತನ ನಂಬಿಕೆಯ ಉತ್ತರವಿದೆ. ಒಂದು ವೇಳೆ ಮುಂದಿನ ವ್ಯಕ್ತಿ ಮಾತನಾಡುತ್ತಿರುವಾಗ ಅಕಸ್ಮಾತ್ತಾಗಿ ಸೀನು ಬಂದುಬಿಟ್ಟರೆ ಆತನ ಮಾತುಗಳು ನಿಜ ಎಂದು ಭಾವಿಸಲಾಗುತ್ತದೆ.
ಮನೆಯಲ್ಲಿ ಮರೆತ ವಸ್ತುಗಳನ್ನು ತರಲು ಹಿಂದೆ ಬರಬಾರದು
ರಷ್ಯನ್ನರು ಕಾಲನಿಷ್ಠೆಗೆ ಹೆಸರುವಾಸಿಯಾಗಿದ್ದು ಪ್ರತಿ ವಸ್ತುವನ್ನೂ ಮರೆಯದೇ ತಮ್ಮೊಂದಿಗೆ ತೆಗೆದುಕೊಂಡು ಹೋಗುವವರಾಗಿದ್ದಾರೆ. ಇದಕ್ಕೆ ಪುರಾತನ ನಂಬಿಕೆಯೇ ಪ್ರಮುಖ ಕಾರಣವಾಗಿದೆ. ಏನೆಂದರೆ ಒಂದು ವೇಳೆ ಯಾರಾದರೂ ಮನೆಯಿಂದ ಹೊರಬಿದ್ದ ಬಳಿಕ ಯಾವುದೋ ಅಗತ್ಯವಸ್ತು ಮನೆಯಲ್ಲಿಯೇ ಮರೆತು ಬಂದಿರುವುದು ತಡವಾಗಿ ನೆನಪಾದರೆ, ಈಗ ಹಿಂದಿರುಗಿ ಹೋಗಿ ಆ ವಸ್ತುವನ್ನು ತರಲು ಸಾಧ್ಯವಿಲ್ಲ. ಒಂದು ವೇಳೆ ಹೀಗೆ ಮಾಡಿದರೆ ಆ ವ್ಯಕ್ತಿಗೆ ದುರಾದೃಷ್ಟ ಕಾಡುತ್ತದೆ ಹಾಗೂ ಯಾವ ಕೆಲಸಕ್ಕೆ ಹೊರಟಿದ್ದರೂ ಆ ಪ್ರಯಾಣ ಅಪಾಯಕಾರಿಯಾಗಿರುತ್ತದೆ. ಆದ್ದರಿಂದ ರಷ್ಯನ್ನರು ಮನೆಯಲ್ಲಿ ಏನಾದರೂ ಮರೆತರೆ ಇವನ್ನು ಹಾಗೇ ಬಿಡುತ್ತಾರೆಯೇ ವಿನಃ ತೆಗೆದುಕೊಳ್ಳಲು ಹಿಂದಿರುಗುವುದಿಲ್ಲ.
ಖಾಲಿ ಬಾಟಲಿಗಳನ್ನು ಸರ್ವಥಾ ಮೇಜಿನ ಮೇಲೆ ಇರಿಸದಿರುವುದು
ರಷ್ಯನ್ನರ ನೆಚ್ಚಿನ ಮಾದಕ ಪಾನೀಯವಾದ ವೋಡ್ಕಾ, ಬಿಯರ್ ಅಥವಾ ವೈನ್ ಗಾಜಿನ ಬಾಟಲಿಯಲ್ಲಿ ಲಭ್ಯವಿದ್ದು ಇವುಗಳನ್ನು ಸೇವಿಸುವ ಮುನ್ನ ಭರ್ತಿ ಬಾಟಲಿಗಳನ್ನು ಮೇಜಿನ ಮೇಲಿಟ್ಟರೂ ಇವು ಖಾಲಿಯಾದ ಬಳಿಕ ನೆಲದ ಮೇಲಿಡುತ್ತಾರೆ. ಖಾಲಿ ಬಾಟಲಿಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗುವುದಾಗಲೀ ಮೇಜಿನ ಮೇಲಿಡುವುದಾಗಲೀ ಮಾಡಿದರೆ ಇದು ಇತರ ವ್ಯಕ್ತಿಗಳಿಗೆ ಇರಿಸು ಮುರುಸಾಗುತ್ತದೆ ಎಂದು ಭಾವಿಸುತ್ತಾರೆ. ಮುಂದಿನ ಬಾರಿ ರಷ್ಯಾಕ್ಕೆ ಭೇಟಿ ನೀಡುವುದಿದ್ದರೆ ಈ ವಿಷಯ ನೆನಪಿರಲಿ.
ಕತ್ತಿಗೆ ಅಂಟಿಕೊಂಡಿದ್ದ ಆಹಾರವನ್ನು ನೆಕ್ಕಬಾರದು
ರಷ್ಯನ್ನರೊಂದಿಗೆ ಊಟ ಮಾಡಲು ಕುಳಿತಾಗ ಅವರ ಊಟದ ವಿಧಾನವನ್ನು ತಪ್ಪದೇ ಅನುಸರಿಸುವುದು ಅಗತ್ಯವಾಗಿರುತ್ತದೆ. ಆಹಾರವನ್ನು ಕತ್ತರಿಸಲು ಬಳಸಲಾಗುವ ಕತ್ತಿಗೆ ಅಂಟಿಕೊಂಡಿರುವ ಆಹಾರವನ್ನು ತಿನ್ನಲು ಇಲ್ಲಿ ಅವಕಾಶವಿಲ್ಲ. ಹೀಗೆ ಮಾಡಿದರೆ ಆ ವ್ಯಕ್ತಿ ಕ್ರೂರ ಹಾಗೂ ಕೆಟ್ಟವನೆಂಬ ಅಭಿಪ್ರಾಯವನ್ನು ಪಡೆಯಲಾಗುತ್ತದೆ. ಅಡುಗೆ ಪಾತ್ರೆಗಳು ನಂಬಲರ್ಹ ಎಂದು ಪರಿಗಣಿಸಲಾಗಿದ್ದು ಈ ಪಾತ್ರೆಗಳಿಂದ ಆಹಾರವನ್ನು ಪ್ರತ್ಯೇಕಿಸಲು ಬಳಸಲಾದ ಕತ್ತಿ, ಚಾಕು, ಫೋರ್ಕ್ ಮುಂತಾದವುಗಳಿಗೆ ಅಂಟಿಕೊಂದಿರುವ ಆಹಾರವನ್ನು ನೆಕ್ಕುವುದು ಆ ವ್ಯಕ್ತಿಯ ಕ್ರೌರ್ಯತನವೆಂದು ಪರಿಗಣಿಸಲಾಗುತ್ತದೆ.
ಮಳೆಯಲ್ಲಿಯೇ ಮದುವೆ
ಮಳೆಯಲ್ಲಿ ಹೊರಹೋಗುವುದು ಎಷ್ಟು ಶುಭಕರವೋ, ಅದಕ್ಕಿಂತಲೂ ಹೆಚ್ಚಾಗಿ ಮದುವೆಯ ಸಂದರ್ಭದಲ್ಲಿ ಮಳೆಯಾಗುವುದು ಶುಭಕರ ಎಂದು ರಷ್ಯನ್ನರು ಭಾವಿಸುತ್ತಾರೆ. ಮುಂದಿನ ದಿನಗಳಲ್ಲಿ ಈ ದಂಪತಿಗಳಿಗೆ ಶ್ರೀಮಂತಿಕೆ ಹಾಗೂ ಸಮೃದ್ದಿ ಒದಗುತ್ತದೆ ಎಂದು ಹೇಳುತ್ತಾರೆ. ರೇನ್ ರೇನ್ ಗೋ ಅವೇ ಎಂಬ ಪಾಶ್ಚಾತ್ಯ ದೇಶಗಳ ಶಿಶುಗೀತೆ ಇಲ್ಲಿ ರೇನ್ ರೇನ್ ಕಂ ಅಗೇನ್ ಎಂದು ಹಾಡುವಂತಾಗಿದೆ.