ಶಿರಸಿ: ಇಲ್ಲಿನ ರೈತ ಸಂಪರ್ಕ ಕೇಂದ್ರದ ಪಕ್ಕದಲ್ಲಿರುವ ಆಹಾರ ದಾಸ್ತಾನು ಉಗ್ರಾಣ ಕೇಂದ್ರದಲ್ಲಿ ಕಳೆದ ಏಳು ತಿಂಗಳಿನಿಂದ ಗೋಧಿ ಮತ್ತು ಹೆಸರು ಬೇಳೆಗಳು ಹುಳ ಹಿಡಿದು ಹಾಳಾಗುತ್ತಿರುವುದು ಬೆಳಕಿಗೆ ಬಂದಿದೆ. ಉಗ್ರಾಣದಲ್ಲಿ 272 ಕ್ವಿಂಟಲ್ ಗೋಧಿ ಹಾಗೂ 21 ಕ್ವಿಂಟಲ್ ಹೆಸರುಬೇಳೆ ಹುಳ ಹಿಡಿದು ಹಾಳಾಗುತ್ತಿದೆ. ಮಂಗಳವಾರ ಬಿಜೆಪಿ ಯುವ ಮೋರ್ಚಾ ಪ್ರಮುಖ ನರಸಿಂಹ ಕೋಣೆಮನೆ , ತಾಪಂ ಉಪಾಧ್ಯಕ್ಷ ಚಂದ್ರು ಎಸಳೆ, ಗ್ರಾಮೀಣ ಅಧ್ಯಕ್ಷ ಆರ್.ವಿ.ಹೆಗಡೆ ಮತ್ತಿತ್ತರರು ಉಗ್ರಾಣಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಬೆಳಕಿಗೆ ಬಂದಿದೆ.
ಈ ವೇಳೆ ಮಾತನಾಡಿದ ಯುವಮೊರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ನರಸಿಂಹ ಕೋಣೆಮನೆ ಬಡವರ ಪಡಿತರ ರಾಜ್ಯ ಸರ್ಕಾರದ ನಿರ್ಲಕ್ಷದಿಂದ ಹಾಳಾಗುತ್ತಿದೆ. ಜಿಲ್ಲೆಯಾದ್ಯಂತ ಅಭಿಯಾನದ ರೀತಿಯಲ್ಲಿ ಇದನ್ನು ಮಾಡುತ್ತಿದ್ದು ಎಲ್ಲೆಡೆ ಹುಳ ಹಿಡಿದ ಬೆಳೆ ಕಾಳುಗಳು ಕಾಣುತ್ತಿದೆ. ಇದೊಂದು ಸುಮಾರು ₹200 ಕೋಟಿಗೂ ಅಧಿಕ ಮೊತ್ತದ ಹಗರಣದಂತೆ ಕಂಡು ಬರುತ್ತಿದೆ. ನಮ್ಮ ಜಿಲ್ಲೆಯೊಂದರಲ್ಲಿಯೇ 4 ಕೋಟಿಗೂ ಅಧಿಕ ಮೊತ್ತದ ಆಹಾರ ಖರೀದಿಯಾಗಿದೆ. ಆದ ಕಾರಣ ಇದರ ಸಂಪೂರ್ಣ ತನಿಖೆಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದರು.
ತಾ.ಪಂ. ಉಪಾಧ್ಯಕ್ಷ ಚಂದ್ರು ಎಸಳೆ ಮಾತನಾಡಿ ಇದೊಂದು ಖಂಡನಾರ್ಯ ಕೆಲಸ. ಹಾಳಾದ ಬೇಳೆ ಕಾಳುಗಳು ಬಡವನಿಗೆ ದೊರಕಿದ್ದರೆ ಒಂದು ವರ್ಷದ ಜೀವನ ನಡೆಯುತ್ತಿತ್ತು. ಇದನ್ನು ನಾವು ಕೆಡಿಪಿಯಲ್ಲಿಯೂ ಖಂಡಿಸುತ್ತೇವೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ನಾಗರಾಜ ಶೆಟ್ಟಿ, ಪ್ರಸನ್ನ ಹೆಗಡೆ ಮುಂತಾದವರು ಇದ್ದರು.