ಬೆಂಗಳೂರು : ಕಲ್ಲಿದ್ದಲು ಖರೀದಿಗೆ ಸಂಬಂಧಿಸಿದಂತೆ ರಾಜ್ಯಸರ್ಕಾರ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಆರೋಪಿಸಿದ ಬೆನ್ನಲ್ಲೆ ಬಿಜೆಪಿ ಅಧಿಕಾರಾವಧಿಯಲ್ಲಿ ವಿದ್ಯುತ್ ಖರೀದಿಯಲ್ಲಿ ನಡೆದ ಗೋಲ್‌ಮಾಲ್ ಪ್ರಕರಣವನ್ನು ಮುಂದಿಟ್ಟುಕೊಂಡು ಬಿಜೆಪಿಗೆ ತಿರುಗೇಟು ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದಾಗಿದ್ದಾರೆ.ಬಿಜೆಪಿಯ ಅಧಿಕಾರಾವಧಿಯಲ್ಲಿ ನಿಯಮಗಳನ್ನು ಗಾಳಿಗೆ ತೂರಿ 28 ಸಾವಿರ ಕೋಟಿ ರೂ. ಮೊತ್ತದ ವಿದ್ಯುತ್ ಖರೀದಿ ಮಾಡಿದ್ದು, ಇದರಿಂದ ರಾಜ್ಯಸರ್ಕಾರದ ಬೊಕ್ಕಸಕ್ಕೆ ನಷ್ಟವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರು ಸದನ ಸಮಿತಿಗೆ ನೀಡಿದ್ದ ವರದಿಯನ್ನಾಧರಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ವರದಿಯನ್ನು ಸಿದ್ಧಪಡಿಸುತ್ತಿದ್ದು, ಈ ಮೂಲಕ ಬಿಜೆಪಿಗೆ ತಿರುಗುಬಾಣವಾಗಿಸಲು ಸಿದ್ಧತೆ ನಡೆಸಿದ್ದಾರೆ.

ವಿದ್ಯುತ್ ಖರೀದಿಯಲ್ಲಿ ನಡೆದಿರುವ ಗೋಲ್‌ಮಾಲ್ ಕುರಿತು ಸಂಪೂರ್ಣ ಮಾಹಿತಿ ಕಲೆಹಾಕಿರುವ ರಾಜ್ಯಸರ್ಕಾರ ಈ ಸಂಬಂಧ ಬೆಳಗಾವಿಯಲ್ಲಿ ನಡೆಯಲಿರುವ ಅಧಿವೇಶನದಲ್ಲಿ ವರದಿ ಮಂಡಿಸಿ ಸದನ ಸಮಿತಿಯ ಮೂಲಕ ಬಿಜೆಪಿ ಸರ್ಕಾರದ ಅವ್ಯವಹಾರಗಳನ್ನು ತನಿಖೆ ನಡೆಸಲು ಮುಂದಾಗಿದೆ. ಇದರಿಂದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹಾಗೂ ಶೋಭಾಕರಂದ್ಲಾಜೆ ಸಂಕಷ್ಟಕ್ಕೆ ಸಿಲುಕುವಂತಾಗಿದೆ.ಈ ಸಂಬಂಧ ಇಂಧನ ಸಚಿವ ಡಿ.ಕೆ ಶಿವಕುಮಾರ್ ಇದೇ 30 ರಂದು ಸದನ ಸಮಿತಿ ಸಭೆ ಕರೆದಿದ್ದು, ಆ ಸಭೆಗೆ ಹಾಜರಾಗುವಂತೆ ಕುಮಾರಸ್ವಾಮಿಯವರಿಗೆ ಖುದ್ದು ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ. ಆರೋಗ್ಯದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೆ ಅವರ ಮನೆಗೆ ತೆರಳಿ ವರದಿಗೆ ಸಹಿ ಹಾಕಿಸಿಕೊಳ್ಳಲು ಕೂಡ ಡಿ.ಕೆ ಶಿವಕುಮಾರ್ ಮುಂದಾಗಿದ್ದಾರೆ.ಇಂಧನ ಇಲಾಖೆಯಲ್ಲಿ 28 ಸಾವಿರ ಕೋಟಿಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎನ್ನುವ ಕುರಿತು ಕಳೆದ 2 ತಿಂಗಳ ಹಿಂದೆ ಕುಮಾರಸ್ವಾಮಿ ಸದನ ಸಮಿತಿಗೆ ನೀಡಿದ್ದ ಮಾಹಿತಿ ಸೋರಿಕೆಯಾಗಿದ್ದು, ಅದರ ವರದಿಯಾಧಾರದ ಮೇಲೆ ಬಿಜೆಪಿ ನಾಯಕರನ್ನು ಸಂಕಷ್ಟಕ್ಕೆ ಸಿಲುಕಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ತಂತ್ರ ಹೆಣೆದಿದ್ದಾರೆ.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 01-03-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಭಾರಿ ಮೊತ್ತದ ವಿದ್ಯುತ್ ಖರೀದಿಗೆ ಅವಕಾಶ ಬೇಡ ಎಂದು ಆರ್ಥಿಕ ಇಲಾಖೆ ಅಡ್ಡಗಾಲು ಹಾಕಿದರೂ ಯಾವುದನ್ನು ಲೆಕ್ಕಿಸದ ಆಗಿನ ಇಂಧನ ಸಚಿವೆ ಶೋಭಾಕರಂದ್ಲಾಜೆ ಹಾಗೂ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ವಿದ್ಯುತ್ ಖರೀದಿ ಮಾಡಿದ್ದರಿಂದ ಸಾವಿರಾರು ಕೋಟಿ ರೂ. ಸರ್ಕಾರಕ್ಕೆ ನಷ್ಟವಾಗಿದೆ ಎಂದು ಕುಮಾರಸ್ವಾಮಿ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದರು. ಅದು ಈಗ ಬಿಜೆಪಿ ನಾಯಕರನ್ನು ಸಂಕಷ್ಟಕ್ಕೆ ಸಿಲುಕುವಂತೆ ಮಾಡಿದೆ. ರಾಜ್ಯವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಆರೋಪ-ಪ್ರತ್ಯಾರೋಪಗಳು ಹೆಚ್ಚಾಗುತ್ತಿದ್ದು, ಚುನಾವಣೆ ವೇಳೆಗೆ ಇನ್ನಷ್ಟು ಹಗರಣಗಳ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ಕೆಸರೆರೆಚಿಕೊಳ್ಳಲು ಕೂಡ ಮುಂದಾಗಿದ್ದಾರೆ.

RELATED ARTICLES  ಕಾಣಿಸಿಕೊಂಡಿದೆ ವಿಚಿತ್ರ ಜ್ವರ : ಎಚ್ಚರಿಕೆಯ ಸಂದೇಶ ನೀಡಿದ ವೈದ್ಯರು.