ಟಿಪ್ಪು ಸುಲ್ತಾನ್ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹಾಗೂ ಶಾಸಕ ಸಿ.ಟಿ ರವಿ ವಿರುದ್ದ ನಗರದ 10ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ದಾಖಲಾಗಿದೆ.
ರಾಜ್ಯ ಸರ್ಕಾರದ ಟಿಪ್ಪು ಜಯಂತಿ ಆಚರಣೆಯನ್ನ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದು, ಈ ಕುರಿತು ಕೋರ್ಟ್ ನಲ್ಲಿ ದೂರು ದಾಖಲಾಗಿದೆ. ಆಲಂ ಪಾಷಾ ಎಂಬುವವರು ಇಬ್ಬರು ನಾಯಕರ ವಿರುದ್ದ ದೂರು ನೀಡಿದ್ದಾರೆ.
ಟಿಪ್ಪು ಸುಲ್ತಾನ್ ಬಗ್ಗೆ ನಾಡದ್ರೋಹಿ, ಅತ್ಯಾಚಾರಿ ಎಂಬ ಪದ ಬಳಸಿದ್ದಾರೆ. ಹೀಗಾಗಿ ಇವರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಲಂ ಪಾಷಾ ಇಂದಿರಾ ನಗರ ಪೊಲೀಸ್ ಠಾಣೆಗೆ ದೂರು ನೀಡಲು ಮುಂದಾಗಿದ್ದರು. ಆದರೆ ಪೊಲೀಸರು ದೂರು ಸ್ವೀಕರಿಸದ ಹಿನ್ನೆಲೆ 10ನೇ ಎಸಿಎಂಎಂ ಕೋರ್ಟ್ ನಲ್ಲಿ ದೂರು ನೀಡಿದ್ದಾರೆ. ಅಲ್ಲದೆ ಇಬ್ಬರು ನಾಯಕರ ವಿರುದ್ದ ಎಫ್ ಐಆರ್ ದಾಖಲಿಸಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾರೆ.
ಈ ದೂರಿನ ಕುರಿತು ಅಕ್ಟೋಬರ್ 30ರಂದು ಕೋರ್ಟ್ ವಿಚಾರಣೆ ನಡೆಸಲಿದೆ.