ಶಿರಸಿ: ತಾಲೂಕಿನ ಶ್ರೀ ಲಕ್ಷ್ಮೀನರಸಿಂಹ ಮಾಧ್ಯಮಿಕ ಪ್ರೌಢಶಾಲೆ ಸಾಲ್ಕಣಿಯ ವಿದ್ಯಾರ್ಥಿಗಳಿಬ್ಬರು ಸಾರ್ವಜನಿಕ ಶಿಕ್ಷಣ ಇಲಾಕೆ ಆಯೋಜನೆಯಲ್ಲಿ ಈಚೆಗೆ ನಡೆದ ರಾಜ್ಯ ಮಟ್ಟದ ಕ್ರೀಡಾಕೂಟ ಹಾಗೂ ಯೋಗಾಸನ ಸ್ಪರ್ಧೆಗಳಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗುವ ಮೂಲಕ ಸಾಧನೆಗೈದಿದ್ದಾರೆ.

ಪ್ರೌಢಶಾಲೆಯ ವಿದ್ಯಾರ್ಥಿ ಅಭಿಷೇಕ ಹೆಗಡೆ ಜೋಗಿನಮನೆ ಈಚೆಗೆ ಗದಗದಲ್ಲಿ ನಡೆದ 14ರಿಂದ 19ವರ್ಷ ವಯೋಮಿತಿಯೊಳಗಿನ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಗಳಿಸಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಚಿನ್ನದ ಪದಕ ವಿಜೇತನಾಗಿದ್ದಾನೆ.

ಛತ್ತೀಸಘಡ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿರುವ ಅಭಿಷೇಕ ಹೆಗಡೆ ತಾಲೂಕಿನ ಸಾಲ್ಕಣಿ ಬಳಿಯಲ್ಲಿನ ಜೋಗಿನಮನೆ ಗ್ರಾಮದ ಬಾಲು ಹೆಗಡೆ ಹಾಗೂ ಮಂಗಳಾ ಹೆಗಡೆ ದಂಪತಿಗಳ ಪುತ್ರನಾಗಿದ್ದಾನೆ. ಈಗಾಗಲೆ ರಾಜ್ಯ ಹಾಗೂ ರಾಷ್ಟ್ರಮಟ್ಟದ ಸಾಕಷ್ಟು ಯೋಗಾಸನ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಹತ್ತಾರು ಚಿನ್ನದ ಪದಕಗಳನ್ನು ತನ್ನದಾಗಿಸಿಕೊಂಡಿದ್ದಾನೆ.

RELATED ARTICLES  ಶಿಕ್ಷಕಿ ಶ್ಯಾಮಲಾ ಹೆಗಡೆಯವರಿಗೆ ‘ವಿನಯ ಸ್ಮೃತಿ ಸಮರ್ಥ ಶಿಕ್ಷಕ’ ಪುರಸ್ಕಾರ

ಪ್ರೌಢಶಾಲೆಯ ಇನ್ನೋರ್ವ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಯಾದ ಕಿರಣ ಗೌಡ 14ರಿಂದ 19ವರ್ಷ ವಯೋಮಿತಿಯೊಳಗಿನ ಫೋಲ್ ವಾಲ್ಟ್ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸುವ ಮೂಲಕ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಈಚೆಗೆ ಬೆಳಗಾವಿಯಲ್ಲಿ ನಡೆದ ಕ್ರೀಡಾಕೂಟದಲ್ಲಿ ಪಾಲ್ಗೊಂಡು ಪ್ರಥಮ ಸ್ಥಾನಗಳಿಸಿರುವ ಕಿರಣ ಗೌಡ ಅಕ್ಟೋಬರ್ ಮೊದಲವಾರದಲ್ಲಿ ಮಧ್ಯಪ್ರದೇಶದ ಭೂಪಾಲ್‍ನಲ್ಲಿ ನಡೆಯಲಿರುವ ರಾಷ್ಟ್ರಮಟ್ಟದ ಕ್ರೀಡಾಕೂಟಕ್ಕೆ ಅ.3ರಂದು ಕರ್ನಾಟಕವನ್ನು ಪ್ರತಿನಿಧಿಸಿ ಪ್ರಯಾಣ ಆರಂಭಿಸಲಿದ್ದಾನೆ.
ತಾಲೂಕಿನ ಕಡಬಾಳ ಸಮೀಪದ ಕಪ್ಪರಮನೆಯ ನಾಗೇಶ ಗೌಡ ಹಾಗೂ ಲಕ್ಷ್ಮೀ ಗೌಡ ದಂಪತಿಗಳ ಪುತ್ರನಾಗಿರುವ ಕಿರಣ ಗೌಡ ಕೇವಲ ಆಟೋಟಗಳಲ್ಲಿ ಮಾತ್ರವಲ್ಲದೆ ಶೈಕ್ಷಣಿಕವಾಗಿಯೂ ಹೆಚ್ಚು ಪ್ರತಿಭಾವಂತನಾಗಿರುವುದು ಗಮನಾರ್ಹ ಸಂಗತಿಯಾಗಿದೆ.

RELATED ARTICLES  ಗೋವಿನ ರಕ್ಷಣೆಗೆ ಆಗ್ರಹ: ಉಪವಾಸ ಸತ್ಯಾಗ್ರಹಕ್ಕೆ ಅನೇಕರ ಬೆಂಬಲ.

ಈ ಇಬ್ಬರು ವಿದ್ಯಾರ್ಥಿಗಳಿಗೂ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಪ್ರಶಾಂತ ಭಟ್ಟ ತರಬೇತಿ ನೀಡಿದ್ದಾರೆ. ಗ್ರಾಮೀಣ ಭಾಗದ ಪುಟ್ಟ ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಇವರು ಈಚೆಗೆ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗಳ ನಿರ್ಣಾಯಕರ ಪರೀಕ್ಷೆಯಲ್ಲಿಯೂ ತೇರ್ಗಡೆ ಹೊಂದಿದ್ದಲ್ಲದೆ ತಮ್ಮದೆ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡಿರುವುದು ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಕಾರಣವಾಗಿದೆ.