ಬೆಂಗಳೂರು: ವಿಧಾನಸೌಧದ ವಜ್ರ ಮಹೋತ್ಸವ ಅಂಗವಾಗಿ ಏರ್ಪಾಡಿಗಿರುವ ವಿಶೇಷ ಕಾರ್ಯಕ್ರಮಗಳಿಗಾಗಿ ವಿಧಾನಸೌಧದ ಆವರಣದಲ್ಲಿ ಸಕಲ ಸಿದ್ಧತೆ ಪೂರ್ಣಗೊಂಡಿದ್ದು, ವಿಶೇಷ ಸಂದರ್ಭದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇನ್ನು ವಿಧಾನಸೌಧ ವಜ್ರಮಹೋತ್ಸವ ಕಾರ್ಯಕ್ರಮಕ್ಕಾಗಿ ವಿಧಾನಸೌಧ ಆವರಣದಲ್ಲಿ ಸಕಲ ಸಿದ್ಧತೆಗಳೂ ಪೂರ್ಣಗೊಂಡಿದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅತಿಥಿಗಳಿಗಾಗಿ ಅವರಣದಲ್ಲಿ ವಿಶೇಷ ಆಸನ ವ್ಯವಸ್ಥೆ ಮಾಡಲಾಗಿದೆ. ಅಂತೆಯೇ ಶಕ್ತಿ ಸೌಧಕ್ಕೆ ವಿಶೇಷ ಬೆಳಕಿನ ವ್ಯವಸ್ಥೆ ಮಾಡಲಾಗಿದ್ದು, ಕಾರ್ಯಕ್ರಮ ವೀಕ್ಷಣೆಗೆ ಬೃಹತ್ ಎಲ್ ಟಿಡಿ ಪರದೆಗಳನ್ನು ಅಳವಡಿಸಲಾಗಿದೆ.
ಮೂಲಗಳ ಪ್ರಕಾರ ಬುಧವಾರ ಬೆಳಗ್ಗೆ 11 ಗಂಟೆಗೆ ರಾಷ್ಟ್ರಪತಿ ಕೋವಿಂದ್ ಅವರು ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದು, ಅನಂತರ ವಿಧಾನ ಪರಿಷತ್ ಸಭಾಂಗಣ ವೀಕ್ಷಿಸಲಿದ್ದಾರೆ. ಬಳಿಕ ಕೋವಿಂದ್ ಅವರು ಉಭಯ ಸದನಗಳ ಸದಸ್ಯರೊಂದಿಗೆ ಛಾಯಾಚಿತ್ರ ತೆಗೆಸಿಕೊಳ್ಳಲಿದ್ದು, ಮಧ್ಯಾಹ್ನ 1.30ಕ್ಕೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಸದಸ್ಯರೊಂದಿಗೆ ಭೋಜನ ಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದಕ್ಕಾಗಿ ಬ್ಯಾಂಕ್ವೆಟ್ ಹಾಲ್ ಗೆ ಹೊಂದಿಕೊಂಡಿರುವ ಹುಲ್ಲು ಹಾಸಿನ ಮೇಲೆ ಭೋಜನ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 3 ಗಂಟೆಗೆ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಿರ್ದೇಶಕ ಗಿರೀಶ್ ಕಾಸರವಳ್ಳಿ ನಿರ್ದೇಶನದ ‘ವಿಧಾನಸೌಧ ಕಟ್ಟಡ ನಿರ್ಮಾಣ’ ಸಾಕ್ಷ್ಯಾಚಿತ್ರ ಪ್ರದರ್ಶನ ನಡೆಯಲಿದ್ದು, ಅನಂತರ ಟಿ.ಎನ್.ಸೀತಾರಾಂ ನಿರ್ದೇಶನದ “ಕರ್ನಾಟಕ ವಿಧಾನಮಂಡಲ ಶಾಸನಸಭೆ ನಡೆದು ಬಂದ ಹಾದಿ’ ಸಾಕ್ಷ್ಯಾಚಿತ್ರ ಪ್ರದರ್ಶನ ಹಾಗೂ ಮಾಸ್ಟರ್ ಕಿಶನ್ ನಿರ್ದೇಶನದ ‘ವಿಧಾನಸೌಧ 3 ಡಿ ವರ್ಚ್ಯುವಲ್ ರಿಯಾಲಿಟಿ ವಿಡಿಯೋ ಪ್ರದರ್ಶನ ನಡೆಯಲಿದೆ. ಸಂಜೆ 5ರಿಂದ 6 ಗಂಟೆವರೆಗೆ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ನಾಡು-ನುಡಿ, ಕಲೆ ಸಂಸ್ಕೃತಿ, ಪರಂಪರೆ ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಸಂಜೆ 6 ಗಂಟೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿ ಗಳಾದ ಕೆ.ಸಿ.ರೆಡ್ಡಿ, ಕೆಂಗಲ್ ಹನುಮಂತಯ್ಯ, ಕಡಿದಾಳ್ ಮಂಜಪ್ಪ ಅವರ ಕುಟುಂಬ ಸದಸ್ಯರಿಗೆ ಗೌರವ ಸಮರ್ಪಣೆ. ಕಾರ್ಯಕ್ರಮದ ಅನಂತರ ವಿಧಾನಸೌಧ ಪೂರ್ವ ದ್ವಾರದ ಮೆಟ್ಟಿಲುಗಳ ಮೇಲೆ ಸಂಗೀತ ನಿರ್ದೇಶಕ ಹಂಸಲೇಖ ತಂಡದಿಂದ ರಸಮಂಜರಿ ಕಾರ್ಯಕ್ರಮ ಹಾಗೂ ವಿಧಾನಸೌಧ ಕಟ್ಟಡದ ಮೇಲೆ 3ಡಿ ಮ್ಯಾಪಿಂಗ್ ಮೂಲಕ ಸರ್ಕಾರದ ಜನಪರ ಯೋಜನೆಗಳ ಚಿತ್ರ ಪ್ರದರ್ಶನ ನಡೆಯಲಿದೆ. ರಾಷ್ಟ್ರಪತಿಯವ ಉಪಸ್ಥಿತಿ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ.