ಕೋಲ್ಕತಾ: ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದನ್ನು ಕಡ್ಡಾಗೊಳಿಸಿರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು, ನನ್ನ ದೂರವಾಣಿ ಸಂಪರ್ಕ ಕಡಿತಗೊಳಿಸಿದರೂ ನಾನು ಮೊಬೈಲ್ ನಂಬರ್ ಗೆ ಆಧಾರ್ ಲಿಂಕ್ ಮಾಡುವುದಿಲ್ಲ ಎಂದು ಬುಧವಾರ ಹೇಳಿದ್ದಾರೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದೆ ಎಂದು ವಾಗ್ದಾಳಿ ನಡೆಸಿದ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ, ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸಲು ತಮ್ಮ ಪಕ್ಷ ಪ್ರಮುಖ ಪಾತ್ರ ವಹಿಸಲಿದೆ ಎಂದಿದ್ದಾರೆ.
ಕೇಂದ್ರ ಸರ್ಕಾರ ಜನರ ಹಕ್ಕು ಮತ್ತು ಖಾಸಗಿತನದಲ್ಲಿ ಹಸ್ತಕ್ಷೇಪ ಮಾಡುತ್ತಿದೆ. ಹೀಗಾಗಿ ಮೊಬೈಲ್ ನಂಬರ್ ಜೊತೆ ಆಧಾರ್ ಲಿಂಕ್ ಮಾಡಬೇಡಿ. ನಾನು ಸಹ ಆಧಾರ್ ಲಿಂಕ್ ಮಾಡುವುದಿಲ್ಲ ಎಂದು ಟಿಎಂಸಿ ಕೋರ್ ಕಮಿಟಿ ಸಭೆಯಲ್ಲಿ ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಕೇಂದ್ರ ಸರ್ಕಾರ ದೇಶದಲ್ಲಿ ನಿರಂಕುಶಾಧಿಕಾರಿ ಆಳ್ವಿಕೆ ನಡೆಸುತ್ತಿದ್ದು, ಯಾರೂ ಅವರ ವಿರುದ್ಧ ಧ್ವನಿ ಎತ್ತಬಾರದು. ಒಂದು ಧ್ವನಿ ಎತ್ತಿದರೆ ಅವರ ವಿರುದ್ಧ ಇ-ಟಿ, ಇಡಿ, ಸಿಬಿಐ ಛೂ ಬಿಡುತ್ತಾರೆ ಎಂದು ಬ್ಯಾನರ್ಜಿ ಆರೋಪಿಸಿದ್ದಾರೆ.