ನವದೆಹಲಿ: ಕೇಂದ್ರ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳನ್ನು ಸರಕು ಮತ್ತು ಸೇವಾ ತೆರಿಗೆ(ಜಿ.ಎಸ್.ಟಿ) ವ್ಯಾಪ್ತಿಗೆ ತರಲು ಸಿದ್ಧವಿದೆ ಎಂದು ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ.
ಜಿ.ಎಸ್.ಟಿ. ಅಡಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ತರುವುದರಿಂದ ರಾಜ್ಯಗಳಿಗೆ ಆದಾಯ ನಷ್ಟವಾಗಲಿದೆ. ರಾಜ್ಯಗಳು ಈ ಕುರಿತು ತೀರ್ಮಾನ ಕೈಗೊಂಡಲ್ಲಿ ನಾವು ಅಂತಿಮ ತೀರ್ಮಾನ ಕೈಗೊಳ್ಳಬಹುದಾಗಿದೆ ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಭಾರೀ ಏರಿಕೆಯಾಗಿದ್ದ ಕಾರಣ, ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತ ಮಾಡಿತ್ತು. ಇದಾದ ನಂತರದಲ್ಲಿ ಗುಜರಾತ್, ಮಹಾರಾಷ್ಟ್ರ ಮತ್ತು ಹಿಮಾಚಲ ಪ್ರದೇಶಗಳಲ್ಲಿ ವ್ಯಾಟ್ ಬೆಲೆ ಕಡಿತಗೊಳಿಸಲಾಗಿದೆ. ಇದರಿಂದಾಗಿ ಕೆಲವು ರಾಜ್ಯಗಳಲ್ಲಿ ಪೆಟ್ರೋಲ್ ಬೆಲೆ ಕಡಿಮೆಯಾಗಿದೆ.
ವ್ಯಾಟ್ ಕಡಿಮೆ ಮಾಡಲಾದ 3 ರಾಜ್ಯಗಳ ಪೈಕಿ 2 ರಾಜ್ಯಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಜಿ.ಎಸ್.ಟಿ. ಅಡಿ ಪೆಟ್ರೋಲ್, ಡೀಸೆಲ್ ತಂದರೆ ಬೆಲೆ ಕಡಿಮೆಯಾಗಲಿದೆ ಎಂದು ಹೇಳಲಾಗಿದ್ದು, ವ್ಯಾಪಕ ಒತ್ತಾಯವೂ ಕೇಳಿಬಂದಿದೆ.
ಆದರೆ, ಇದನ್ನು ರಾಜ್ಯಗಳತ್ತ ತಿರುಗಿಸಿದ ಅರುಣ್ ಜೇಟ್ಲಿ, ಕೇಂದ್ರ ಪೆಟ್ರೋಲಿಯಂ ಉತ್ಪನ್ನಗಳನ್ನು ಜಿ.ಎಸ್.ಟಿ. ಅಡಿ ತರಲು ಸಿದ್ಧವಿದೆ. ರಾಜ್ಯಸರ್ಕಾರಗಳಿಗೆ ಆದಾಯ ನಷ್ಟವಾಗಲಿರುವುದರಿಂದ ಅವು ಒಮ್ಮತದ ತೀರ್ಮಾನ ಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರಗಳಿಗೆ ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ವ್ಯಾಟ್ ನಿಂದ ಹೆಚ್ಚಿನ ಆದಾಯವಿದೆ. ಆದಾಯ ನಷ್ಟ ಮಾಡಿಕೊಳ್ಳುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.