ಬೆಂಗಳೂರು: ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದೇವರ ಅಭಿಷೇಕಕ್ಕೆ ಇನ್ನು ಮಲ್ನಾಡ್ ಗಿಡ್ಡ ದೇಸಿತಳಿಯ ಹಾಲು ಬಳಕೆಯಾಗಲಿದೆ.
ಇದಕ್ಕಾಗಿ ರಾಮಚಂದ್ರಾಪುರ ಮಠದ ಕಾಮದುಘಾ ವಿಭಾಗದಿಂದ ಎರಡು ಹಸು ಮತ್ತು ಎರಡು ಕರುಗಳನ್ನು ರಾಘವೇಶ್ವರ ಶ್ರೀಗಳು ಬುಧವಾರ ಟಿಟಿಡಿ ಟ್ರಸ್ಟಿಗೆ ಹಸ್ತಾಂತರಿಸಿದರು.
ಭಾರತದ ಅಪೂರ್ವ ಗೋತಳಿಗಳ ಸಂರಕ್ಷಣೆ – ಸಂವರ್ಧನೆಯಲ್ಲಿ ಟಿಟಿಡಿ ಟ್ರಸ್ಟ್ ಮಹತ್ವದ ಪಾತ್ರ ವಹಿಸುತ್ತಿದ್ದು, ಇದು ಸಮಾಜದ ಇತರ ಸಂಘ ಸಂಸ್ಥೆಗಳಿಗೂ ಮಾದರಿ ಎಂದು ಸ್ವಾಮೀಜಿ ಈ ಸಂದರ್ಭದಲ್ಲಿ ಹೇಳಿದರು. ಶ್ರೀಗಳು ಈ ಸಂದರ್ಭದಲ್ಲಿ ಗೋಪೂಜೆ ನೆರವೇರಿಸಿ, ಟಿಟಿಡಿಗೆ ಗೋಗಳನ್ನು ಹಸ್ತಾಂತರಿಸಿದ್ದಾರೆ.
ಎರಡು ದಶಕಗಳಿಂದ ಗೋಸೇವೆಯಲ್ಲಿ ನಿರತರಾಗಿರುವ ಶ್ರೀಮಠಕ್ಕೆ ತಿರುಪತಿ ತಿರುಮಲ ದೇವಸ್ಥಾನ ಟ್ರಸ್ಟ್ ವತಿಯಿಂದ ಓಂಗೋಲ್ ತಳಿಯ ಮೂರು ಗೋವು ಮತ್ತು ಎರಡು ಹೋರಿಗಳನ್ನು ನೀಡಲಾಯಿತು.
ತಿರುಪತಿ ದೇವಸ್ಥಾನದ ಗೋಶಾಲೆಗೆ ಕಾಸರಗೋಡು ಗಿಡ್ಡ ತಳಿಯ ಹಸುಗಳನ್ನು ಶ್ರೀಮಠದಿಂದ ಒದಗಿಸಿಕೊಡುವಂತೆ ಈ ಸಂದರ್ಭದಲ್ಲಿ ಟಿಟಿಡಿ ಪರವಾಗಿ ಅಶೋಕ್ ಮನವಿ ಮಾಡಿಕೊಂಡರು. ಶ್ರೀವಾರಿ ಗೋಸಂರಕ್ಷಣಾ ಟ್ರಸ್ಟ್ ಅಧ್ಯಕ್ಷ ಹರಿನಾಥ್ ರೆಡ್ಡಿ, ಕಾಮದುಘಾ ವಿಭಾಗದ ಕಾರ್ಯದರ್ಶಿ ಡಾ.ವೈ.ವಿ.ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.