ಬೆಂಗಳೂರು: ಇಂದಿರಾ ಗಾಂಧಿ ಜನ್ಮ ಶತಮಾನೋತ್ಸವ ಸಮಾರಂಭದ ಹಿನ್ನೆಲೆಯಲ್ಲಿ ನ.19ರಿಂದ ಮೂರು ದಿನಗಳ ಕಾಲ ನಡೆಸಲು ಉದ್ದೇಶಿಸಿದ್ದ ರಾಜ್ಯ ಪ್ರವಾಸವನ್ನು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹಠಾತ್ ರದ್ದುಪಡಿಸಿದ್ದಾರೆ.
ಈ ಹಠಾತ್ ನಿರ್ಧಾರಕ್ಕೆ, ನ.19ರಂದೇ ಎಐಸಿಸಿ ಅಧ್ಯಕ್ಷರಾಗಿ ಅವರು ಪದಗ್ರಹಣ ನಡೆಸಲು ನಿರ್ಧರಿಸಿರುವುದು ಕಾರಣ ಎಂದು ಎಐಸಿಸಿಯ ಉನ್ನತ ಮೂಲಗಳು ತಿಳಿಸಿವೆ. ರಾಹುಲ್ ಗಾಂಧಿ ಈ ಮೊದಲು ನಿಗದಿಯಾದಂತೆ ನವೆಂಬರ್ 19ರಂದು ಚಿಕ್ಕಮಗಳೂರಿನಲ್ಲಿ ಮಾಜಿ ಪ್ರಧಾನಮಂತ್ರಿ ಇಂದಿರಾ ಗಾಂಧಿ ಜನ್ಮಶತಮಾನೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಿತ್ತು.
ನ.20ರಂದು ಕಡೂರು ಮತ್ತು ಬೀರೂರಿನಲ್ಲಿ ರೋಡ್ ಶೋ ಹಾಗೂ ಶಿವಮೊಗ್ಗದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಅಲ್ಲದೇ ನ.21ರಂದು ಕುಮಟಾದಲ್ಲಿ ಮೀನುಗಾರರ ಸಮಾವೇಶ ಕೂಡ ಏರ್ಪಡಿಸಲಾಗಿತ್ತು. ಈ ಪ್ರವಾಸದ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ಪೂರ್ವಭಾವಿ ಸಭೆಗಳನ್ನು ನಡೆಸಿದ್ದರು. ಆದರೆ, ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷರಾಗಿ ಪದಗ್ರಹಣ ಮಾಡಲು ನಿರ್ಧರಿಸಿರುವುದರಿಂದ ಈ ಪ್ರವಾಸ ರದ್ದಾಗಿದೆ ಎಂದು ಮೂಲಗಳು ಹೇಳಿವೆ.
ಅಲ್ಲದೆ, ಕೆಪಿಸಿಸಿಯು ಬೆಂಗಳೂರಿನಲ್ಲಿ ಎಐಸಿಸಿ ಅಧಿವೇಶನ ನಡೆಸಬೇಕು ಎಂಬ ಕೋರಿಕೆಯನ್ನು ಸದ್ಯಕ್ಕೆ ಹೈಕಮಾಂಡ್ ತಳ್ಳಿ ಹಾಕುವ ಸಾಧ್ಯತೆಯಿದೆ. ಏಕೆಂದರೆ, ದೆಹಲಿ ಅಥವಾ ಪಂಜಾಬ್ನಲ್ಲಿ ಒಂದು ದಿನದ ಎಐಸಿಸಿ ಅಧಿವೇಶನ ನಡೆಸಲು ತೀರ್ಮಾನಿಸಿದೆ ಎನ್ನಲಾಗಿದೆ. ಇದಾದ ನಂತರ ಮೂರು ದಿನಗಳ ಕಾಲದ ಅಧಿವೇಶನ ಬೆಂಗಳೂರಿನಲ್ಲಿ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.