ಕಾರವಾರ: ತಾಲೂಕಿನ ಕದ್ರಾ ಗ್ರಾಮದ ಶಕ್ತಿ ದೇವತೆ ಮಹಾಮಾಯಾ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಸಾವಿರಾರು ಭಕ್ತರ ಸಮುಖದಲ್ಲಿ ವಿಜ್ರಂಭಣೆಯಿಂದ ನಡೆಯಿತು.
ಕಾರವಾರ ತಾಲೂಕಿನ ಪ್ರಥಮ ಜಾತ್ರೆಯೆಂದೇ ಹೇಳಲಾಗುವ ಕದ್ರಾ ಶ್ರೀ ಮಹಾಮಾಯಾ ದೇವಿಯ ಜಾತ್ರೆಯಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದೂರದ ಊರುಗಳಿಂದ ಆಗಮಿಸಿದ ಭಕ್ತರು ವಿಶೇಷ ಪೂಜೆ ಸಲ್ಲಿಸಿ ದೇವಿಯ ದರ್ಶನ ಪಡೆದರು.
ಕದ್ರಾ ಶಿಂಗೇವಾಡಿಯ ದೇವಸ್ಥಾನದಿಂದ ಕದ್ರಾ ಮಾರುಕಟ್ಟೆಯಲ್ಲಿರುವ ಗದ್ದುಗೆಯಲ್ಲಿ ಶ್ರೀದೇವಿಯ ಮೂರ್ತಿಯನ್ನು ತಂದು ಇಡಲಾಗಿತ್ತು. ಅಲ್ಲದೆ ಗುರುವಾರ ಕೂಡ ಭಕ್ತರು ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದು ಬಳಿಕ ಪಲ್ಲಕ್ಕಿ ಮೆರವಣಿಗೆ ಮೂಲಕ ದೇವಿಯನ್ನು ಪುನಾಃ ಶಿಂಗೇವಾಡಿಯ ದೇವಸ್ಥಾನದಲ್ಲಿ ಇಡಲಾಯಿತು.
ಶ್ರೀ ದೇವಿಗೆ ಮಿರಾಶಿ ಮನೆತನದವರು ಪೂಜಿಸುವುದು ವಾಡಿಕೆ. ಅದೇ ರಿತಿ ಜಾತ್ರಾ ಮಹೋತ್ಸವದಂದು ಕೂಡ ಧಾರ್ಮಿಕ ವಿಧಿ ವಿಧಾನಗಳನ್ನು ಅವರು ನೆರವೆರಿಸಿದರು. ದೇವಿ ದರ್ಶನಕ್ಕಾಗಿ ಬುಧವಾರ ಬೆಳಿಗ್ಗೆಯಿಂದಲೇ ಭಕ್ತರು ಸರದಿ ಸಾಲಿನಲ್ಲಿ ನಿಂತು ದರ್ಶನ ಪಡೆಯುತ್ತಿರುವುದು ಕಂಡು ಬಂತು. ಇನ್ನು ದೇವಿಗೆ ಹರಕೆ ಹೊತ್ತುಕೊಂಡವರು ಉಡಿ, ಬಟ್ಟೆ, ತುಲಾಭಾರ ಸೇರಿದಂತೆ ಇನ್ನಿತರ ಹರಕೆಗಳನ್ನು ಅರ್ಪಿಸಿದರು.
ಆದರೆ ಜಾತ್ರೆಗೆ ಸಂಜೆ ಸುರಿದ ಧಾರಕಾರ ಮಳೆಯಿಂದ ಭಕ್ತರು ಕೆಲ ಕಾಲ ತೊಂದರೆ ಅನುಭವಿಸುವಂತಾಗಿತ್ತು. ಅಲ್ಲದೆ ರಾತ್ರಿ ಹೊತ್ತು ವಿದ್ಯುತ್ ಕೂಡ ಕಣ್ಣಾಮುಚ್ಚಾಲೆ ಆಡುತ್ತಿರುವುದು ಕಿರಿ ಕಿರಿ ಉಂಟು ಮಾಡಿತ್ತು. ಸಂಜೆ ದೇವಿಗೆ ಕುರಿ ಕೋಳಿ ಹರಕೆ ಕೂಡ ಅರ್ಪಿಸಲಾಯಿತು.