ಸಿದ್ದಾಪುರ: ತಾಲ್ಲೂಕಿನ ಬೇಡ್ಕಣಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳು ಕೆಲ ದಿನಗಳ ಹಿಂದೆ ಶೌಚಾಲಯವೊಂದನ್ನು ತೆರವು ಮಾಡಿದ ಕ್ರಮ, ಮಂಗಳವಾರ ಇಲ್ಲಿ ನಡೆದ ತಾಲ್ಲೂಕು ಪಂಚಾಯ್ತಿ ವಿಶೇಷ ಸಭೆಯಲ್ಲಿ ಬಿಸಿ ಬಿಸಿ ಚರ್ಚೆಗೆ ದಾರಿ ಮಾಡಿತು. ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ ಅವರು ಈ ಬಗ್ಗೆ ಪ್ರಸ್ತಾಪ ಮಾಡಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ಆರ್ಎಫ್ಒ ಲೋಕೇಶ ಪಾಟಣಕರ್, ‘ಶೌಚಾಲಯವನ್ನು ಅರಣ್ಯ ಸ್ಥಳದಲ್ಲಿ ಕಟ್ಟಿದ್ದರಿಂದ ತೆರವು ಮಾಡಿದ್ದೇವೆ. ಅಲ್ಲದೆ, ಶೌಚಾಲಯ ಮನೆಯಿಂದ ದೂರದಲ್ಲಿತ್ತು’ ಎಂದರು.
ಈ ಕುರಿತು ಆಕ್ಷೇಪ ವ್ಯಕ್ತಪಡಿಸಿದ ಮನಮನೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ವೀರಭದ್ರ ನಾಯ್ಕ, ‘ತೆರವು ಮಾಡಲಾದ ಶೌಚಾಲಯ ಮನೆಯಿಂದ 25 ಅಡಿಗಳಷ್ಟು ದೂರದಲ್ಲಿತ್ತು. ಇದೇ ರೀತಿ ಇಡೀ ತಾಲ್ಲೂಕಿನಲ್ಲಿರುವ (ಅರಣ್ಯ ಭೂಮಿಯಲ್ಲಿರುವ) ಎಲ್ಲ ಕಟ್ಟಡಗಳನ್ನು ಕೀಳುತ್ತೀರಾ ?’ ಎಂದರು.
‘ತೆರವು ಮಾಡುವುದಾದರೆ ಎಲ್ಲವನ್ನೂ ತೆರವು ಮಾಡಿ. ಅದು ಕೇವಲ ಐದು ಅಡಿ ಉದ್ದ ಮತ್ತು ಐದು ಅಡಿ ಅಗಲದ ಶೌಚಾಲಯವಾಗಿತ್ತು’ ಎಂದು ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಸುಧೀರ್ ಗೌಡರ್ ಖಾರವಾಗಿ ಹೇಳಿದರು.
‘ಯಾರೇ ಆಗಲಿ ಹಳೆಯ ಮನೆ ಕೆಡವಿ ಹೊಸದನ್ನು ನಿರ್ಮಾಣ ಮಾಡಲು ಮುಂದಾದಾಗ ನಾವು ತಕರಾರು ಮಾಡಿಲ್ಲ’ ಎಂದು ಆರ್ಎಫ್‌ಒ ಪಾಟಣಕರ್ ಸಮಜಾಯಿಷಿ ನೀಡಿದರು. ಬೇಡ್ಕಣಿಯ ಶೌಚಾಲಯ ತೆರವು ಮಾಡಿದ ಸ್ಥಳವನ್ನು ತಾಲ್ಲೂಕು ಪಂಚಾಯ್ತಿ ಸದಸ್ಯರು ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
‘ಪಟ್ಟಣದಲ್ಲಿ ವಿದ್ಯಾರ್ಥಿಗಳಿಗೆ ಗಾಂಜಾ ಪೂರೈಕೆ ನಡೆಯುತ್ತಿದೆ ಎನ್ನಲಾಗುತ್ತಿದ್ದು, ಎಲ್ಲ ಶಾಲೆಗಳ ಪಕ್ಕದಲ್ಲಿರುವ ಅಂಗಡಿಗಳನ್ನು ಪರಿಶೀಲನೆ ನಡೆಸಬೇಕು. ವಿದ್ಯಾರ್ಥಿಗಳು ವೇಗವಾಗಿ ಬೈಕ್ ಚಾಲನೆ ಮಾಡುತ್ತಿರುವುದು ಕಂಡುಬರುತ್ತಿರುವುದರಿಂದ ಆ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದು ಸುಧೀರ್ ಗೌಡರ್ ಮತ್ತು ಮಹಾಬಲೇಶ್ವರ ಹೆಗಡೆ ಪೊಲೀಸರಿಗೆ ಸೂಚನೆ ನೀಡಿದರು.
ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಪಿಎಸ್ಐ ಉಮೇಶ ಪಾವಸ್ಕರ್ ಭರವಸೆ ನೀಡಿದರು. ಉಪಾಧ್ಯಕ್ಷೆ ದಾಕ್ಷಾಯಿಣಿ ಗೌಡ, ಸದಸ್ಯರಾದ ವಿವೇಕ ಭಟ್ಟ, ರಘುಪತಿ ಹೆಗಡೆ, ಪದ್ಮಾವತಿ ಮಡಿವಾಳ, ಇಓ ಶ್ರೀಧರ ಭಟ್ ಇದ್ದರು.