ನವದೆಹಲಿ : ನವೆಂಬರ್‌ ತಿಂಗಳಿನಿಂದ ಆರಂಭಗೊಳ್ಳಲಿರುವ ಮದುವೆ ಋತುವಿನಲ್ಲಿ ಕುಟುಂಬವೊಂದು ಮಾಡುವ ವೆಚ್ಚವು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಕಾರಣಕ್ಕೆ ಶೇ 10 ರಿಂದ ಶೇ 15ರಷ್ಟು ತುಟ್ಟಿಯಾಗಲಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘದ (ಅಸೋಚಾಂ) ವರದಿಯು ಅಂದಾಜಿಸಿದೆ.

ಮದುವೆ ಸಂಭ್ರಮ ಹೆಚ್ಚಿಸುವ ವಸ್ತ್ರ, ಚಿನ್ನಾಭರಣ ಖರೀದಿ, ಸಮಾರಂಭ ನಡೆಯುವ ಸಭಾಂಗಣದ ಬಾಡಿಗೆ, ಊಟೋಪಚಾರ, ಛಾಯಾಚಿತ್ರ, ವಿಡಿಯೊ ಚಿತ್ರೀಕರಣ ಸೇವೆಗೆ ಹೆಚ್ಚು ಹಣ ಪಾವತಿಸುವುದು ಈಗ ಅನಿವಾರ್ಯವಾಗಲಿದೆ.

ಗರಿಷ್ಠ ಬೆಲೆಯ ನೋಟುಗಳ ರದ್ದತಿ ಮತ್ತು ಜಿಎಸ್‌ಟಿ ಫಲವಾಗಿ ಮದುವೆ ಸಿದ್ಧತೆಗಳ ವೆಚ್ಚ ದುಬಾರಿಯಾಗಿ ಪರಿಣಮಿಸಲಿದೆ. ಬ್ಯೂಟಿಪಾರ್ಲರ್‌, ಮದುವೆ ಕರೆಯೋಲೆಗಳ ಕೊರಿಯರ್‌, ಅತಿಥಿಗಳಿಗಾಗಿ ಹೋಟೆಲ್‌ ಕೋಣೆಗಳ ಬಾಡಿಗೆ ವೆಚ್ಚಗಳೂ ತುಟ್ಟಿಯಾಗಲಿವೆ.

RELATED ARTICLES  ಮಾಂಗಲ್ಯ ಕದ್ದವನು ಪೊಲೀಸರ ಬಲೆಗೆ..!

ವಿವಿಧ ಬಗೆಯ ಸೇವೆಗಳ ‘ಜಿಎಸ್‌ಟಿ’ಯು ಶೇ 18 ರಿಂದ 28ರವರೆಗೆ ಇರಲಿದೆ. ಜಿಎಸ್‌ಟಿ ಜಾರಿ ಮುನ್ನ ಮದುವೆ ಸಿದ್ಧತೆಗಳಿಗೆ ಮಾಡುವ ವೆಚ್ಚಗಳಿಗೂ ಅಧಿಕೃತ ರಸೀದಿ ನೀಡುವ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿರಲಿಲ್ಲ. ಹೀಗಾಗಿ ತೆರಿಗೆ ಕಟ್ಟುವ ಅಗತ್ಯ ಉದ್ಭವಿಸುತ್ತಿರಲಿಲ್ಲ. ಜಿಎಸ್‌ಟಿ ವ್ಯವಸ್ಥೆಯಡಿ ತೆರಿಗೆ ಪಾವತಿಸುವ ಬದ್ಧತೆ ಹೆಚ್ಚಿದೆ.

ಅನಿವಾಸಿ ಭಾರತೀಯರು, ಆಗರ್ಭ ಸಿರಿವಂತರು ಕಡಲದಂಡೆ, ವಿಲಾಸಿ ತಾಣಗಳಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ಏರ್ಪಡಿಸುತ್ತಾರೆ. ಇಂತಹ ಮದುವೆಗಳಲ್ಲಿ ಅಪಾರ ಪ್ರಮಾಣದ ಹಣ ವೆಚ್ಚ ಮಾಡಲಾಗುತ್ತಿದೆ. ಜಿಎಸ್‌ಟಿ ಕಾರಣಕ್ಕೆ ಇಂತಹ ಮದುವೆಗಳ ವೆಚ್ಚವೂ ಗಮನಾರ್ಹ ಏರಿಕೆ ಕಾಣಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

RELATED ARTICLES  ವಿಧಾನಸಭೆಯ ಚುನಾವಣೆಯ ನಂತರ ಬಿಜೆಪಿಯಲ್ಲಿ ಹೊಸ ಸಂಚಲನ

ಅಂದಾಜಿನ ಪ್ರಕಾರ, ಭಾರತೀಯರು ತಮ್ಮ ಸಂಪತ್ತಿನ ಒಂದು ಐದಾಂಶದಷ್ಟನ್ನು ಮದುವೆ ಸಮಾರಂಭಗಳಿಗೆ ವೆಚ್ಚ ಮಾಡುತ್ತಾರೆ. ಜಿಎಸ್‌ಟಿ ಫಲವಾಗಿ ಮದುವೆ ವೆಚ್ಚ ಏರಿಕೆಯಾಗಲಿರುವುದರಿಂದ ಅನೇಕರು ಮದುವೆ ಬಜೆಟ್‌ ಪರಿಷ್ಕರಿಸಲು ಮುಂದಾಗಲಿದ್ದಾರೆ. ವೆಚ್ಚಕ್ಕೆ ಕಡಿವಾಣ ಹಾಕಲಿದ್ದಾರೆ ಎಂದು ‘ಅಸೋಚಾಂ’ ವರದಿಯಲ್ಲಿ ಅಭಿಪ್ರಾಯಪಡಲಾಗಿದೆ.

ಸರಕು/ ಸೇವೆ ಜಿಎಸ್‌ಟಿ

₹ 500ಕ್ಕಿಂತ ಹೆಚ್ಚಿನ ಮೌಲ್ಯದ ಪಾದರಕ್ಷೆ 18

ಚಿನ್ನಾಭರಣ ಖರೀದಿ 3

ಪಂಚತಾರಾ ಹೋಟೆಲ್‌ ಕೋಣೆ ಬಾಡಿಗೆ 28

ಸಭೆ– ಸಮಾರಂಭ ನಿರ್ವಹಣಾ ಸೇವೆ 18

ಸಭಾಂಗಣ ಬುಕಿಂಗ್‌ 18