ನವದೆಹಲಿ: ಆಧಾರ್ ಸಂಖ್ಯೆ ಹೊಂದದೇ ಇರುವುದಕ್ಕೆ ಅಥವಾ ಅದನ್ನು ಪಡಿತರ ಚೀಟಿಯೊಂದಿಗೆ ಜೋಡಣೆ ಮಾಡದೇ ಇರುವ ಕಾರಣಕ್ಕಾಗಿ ಯಾರಿಗೂ ಕೂಡ ಪಡಿತರ ಸೌಲಭ್ಯವನ್ನು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಆಹಾರ ಸಚಿವಾಲಯ ಎಲ್ಲ ರಾಜ್ಯಗಳಿಗೂ ಕಟ್ಟುನಿಟ್ಟಿನ ಸೂಚನೆ ನೀಡಿದೆ.
ನಿಯಮಗಳನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದೆ.
ಆಧಾರ್ ಕಾರ್ಡ್ ಇಲ್ಲ ಎಂಬ ಕಾರಣಕ್ಕೆ ಪಡಿತರ ವ್ಯವಸ್ಥೆಯ ಅರ್ಹ ಫಲಾನುಭವಿಗಳ ಪಟ್ಟಿಯಿಂದ ಕುಟುಂಬಗಳ ಹೆಸರುಗಳನ್ನು ತೆಗೆದು ಹಾಕದಂತೆಯೂ ಸಚಿವಾಲಯ ನಿರ್ದೇಶಿಸಿದೆ.
ಆಧಾರ್ ಸಂಖ್ಯೆಯನ್ನು ಜೋಡಿಸಿಲ್ಲ ಎಂಬ ಕಾರಣ ನೀಡಿ ಪಡಿತರ ಚೀಟಿ ರದ್ದುಗೊಳಿಸಿದ್ದರಿಂದ ಪಡಿತರ ಆಹಾರ ಸಿಗದೇ ಜಾರ್ಖಂಡ್‌ನಲ್ಲಿ 11 ವರ್ಷದ ಬಾಲಕಿ ಹಸಿವಿನಿಂದ ಮೃತಪಟ್ಟಿದ್ದಾಳೆ ಎಂದು ಹೇಳಲಾದ ಪ್ರಕರಣ ವರದಿಯಾದ ನಂತರ ಸಚಿವಾಲಯ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ಸೂಚನೆ ನೀಡಿದೆ.