ಬೆಂಗಳೂರು.ಅ.26 : ಡಿವೈಎಸ್ ಪಿ ಎಂ.ಕೆ ಗಣಪತಿ ಅನುಮಾನಸ್ಪಾದ ಸಾವಿನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಕೆ.ಜೆ ಜಾರ್ಜ್ ಸೇರಿದಂತೆ ಮೂವರ ವಿರುದ್ಧ ಸಿಬಿಐ ಅಧಿಕಾರಿಗಳು ಎಫ್‌ಐಆರ್ ದಾಖಲಿಸಿದ್ದಾರೆ. ಸಿಐಡಿ ತನಿಖಾ ತಂಡ ಇಂದು ಸಿಬಿಐಗೆ ತನ್ನ ವಿಸ್ತೃತ ತನಿಖಾ ವರದಿಯನ್ನು ಹಸ್ತಾಂತರ ಮಾಡಿತ್ತು. ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಸುಪ್ರೀಂಕೋರ್ಟ್ ಕೂಡಾ ಸೂಚಿಸಿತ್ತು.ಈ ಹಿನ್ನೆಲೆಯಲ್ಲಿ ಸಿಐಡಿ ತನಿಖಾ ತಂಡ ವರದಿಯನ್ನು ಇಂದು ಚೆನ್ನೈನಲ್ಲಿರುವ ಸಿಬಿಐ ಅಧಿಕಾರಿಗಳಿಗೆ ಹಸ್ತಾಂತರಿಸಿತ್ತು. ಸಚಿವ ಕೆ.ಜೆ.ಜಾರ್ಜ್, ಹಿರಿಯ ಐಎಎಸ್ ಅಧಿಕಾರಿ ಎ.ಎನ್.ಪ್ರಸಾದ್, ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಅವರ ವಿರುದ್ಧ ಸಿಬಿಐ ತಂಡ ಎಫ್ ಐ ಆರ್ ದಾಖಲಿಸಿದೆ.
ಮಡಿಕೇರಿಯ ಲಾಡ್ಜ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವುದಕ್ಕೂ ಮುನ್ನ ಗಣಪತಿ ತಮ್ಮ ಜೀವಕ್ಕೆ ಯಾವುದೇ ರೀತಿಯ ತೊಂದರೆಯಾದರೆ ಗೃಹಸಚಿವರಾಗಿದ್ದ ಕೆ.ಜೆ.ಜಾರ್ಜ್ ಮತ್ತು ಹಿರಿಯ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಾಂತಿ ಮತ್ತು ಎ.ಎಂ.ಪ್ರಸಾದ್ ಅವರೇ ಕಾರಣವೆಂದು ಆರೋಪ ಮಾಡಿದ್ದರು.ಇದೇ ಪ್ರಕರಣದಲ್ಲಿ ಸಚಿವ ಜಾರ್ಜ್ ರಾಜಿನಾಮೆ ಕೂಡಾ ನೀಡಿದ್ದರು. ನಂತರ ಕ್ಲೀನ್ಚಿಟ್ ಪಡೆದು ಮತ್ತೆ ಸಚಿವರಾಗಿದ್ದರು. ಇದೀಗ ಜಾರ್ಜ್ ಹೆಸರು ಮತ್ತೆ ಕೇಳಿ ಬಂದಿದೆ.