ಕುಮಟಾ: ಸ್ತನ ಕ್ಯಾನ್ಸರ್‍ನ ಮುನ್ನರಿವಿರದೆ, ಆರಂಭಿಕ ಹಂತದಲ್ಲಿ ರೋಗ ಪತ್ತೆ ಮಾಡುವಲ್ಲಿ ವಿಫಲರಾಗುವ ಅದೆಷ್ಟೋ ಮಹಿಳೆಯರು ರೋಗದ ಬೀಭತ್ಸತೆಯಿಂದ ಬಳಲುತ್ತಿದ್ದಾರೆ. ಅನುವಂಶೀಯತೆ, ತಂಬಾಕು, ಮಧ್ಯಪಾನ ಮತ್ತು ಸುಪಾರಿ ಸೇವನೆಯಂತಹ ಜೀವನಶೈಲಿ ಸ್ತನ ಕ್ಯಾನ್ಸರ್‍ಗೆ ಮಾರಕವಾಗಿದ್ದು ಕಾಲೇಜು ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವಯೋಮಾನದ ಮಹಿಳೆಯರು ಜಾಗೃತರಾಗಬೇಕೆಂದು ರೇಲ್ವೆ ಸಂಚಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮೆಹೆಕ್ ಸಿಕ್ಕಾ ಎಚ್ಚರಿಸಿದರು.

ಅವರು ಇಲ್ಲಿಯ ನಾದಶ್ರೀ ಕಲಾ ಕೇಂದ್ರದಲ್ಲಿ ರೋಟರಿ ವಾರದ ಸಭೆಯಲ್ಲಿ ಪಾಲ್ಗೊಂಡು ರೋಟರಿ ಸದಸ್ಯರಿಗೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ ಹೊಂದಿರುವ ಲೈಫ್ ಲೈನ್ ಎಕ್ಸ್‍ಪ್ರೆಸ್ ಸಂಚಾರಿ ರೇಲ್ವೆ ಆಸ್ಪತ್ರೆಯ ಕಾರ್ಯಸೂಚಿಯನ್ನು ವಿವರಿಸಿದರು. ಸ್ತನ ಕ್ಯಾನ್ಸರ್ ಪರೀಕ್ಷಿಸುವ ವಿಧಾನಗಳ ಬಗ್ಗೆ ಅರಿವು ಮೂಡಿಸಿದ್ದಲ್ಲದೇ, ರೋಟರಿ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರಿಗೆ ತಿಳುವಳಿಕೆ ನೀಡಿ ಅ.30 ರಿಂದ ನ.19 ರ ವರೆಗೆ ಕುಮಟಾದ ರೇಲ್ವೆ ನಿಲ್ದಾಣದಲ್ಲಿ ಕಾರ್ಯನಿರ್ವಹಿಸಲಿರುವ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ತಪಾಸಿಸಿಕೊಳ್ಳುವಂತೆ ಸೂಚಿಸಬೇಕಾಗಿ ಆಗ್ರಹಿಸಿದರು. ರೋಟರಿ ಅಧ್ಯಕ್ಷ ವಸಂತ ರಾವ್ ಸ್ವಾಗತಿಸಿ, ಸೇವೆಯೇ ಪರಮಧ್ಯೇಯವನ್ನಾಗಿಟ್ಟುಕೊಂಡ ರೋಟರಿ ಸಂಸ್ಥೆಯ ಎಲ್ಲ ಸದಸ್ಯರೂ ಎಲ್ಲ ದಿನಗಳಲ್ಲೂ ಹಾಜರಿದ್ದು ಸಹಕಾರ ನೀಡುವುದಾಗಿ ಭರವಸೆ ನೀಡಿದರು.

RELATED ARTICLES  ಕ್ಯಾನ್ಸರ್ ನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡ ಹೊನ್ನಾವರದ ಮಹಿಳೆ.

ರೋಟರಿ ವೈದ್ಯ ಸದಸ್ಯರಾದ ಡಾ. ದೀಪಕ ಡಿ.ನಾಯಕ, ಡಾ.ಸಚ್ಚಿದಾನಂದ ನಾಯಕ, ಡಾ.ಪ್ರಕಾಶ ಭಟ್ಟ, ಡಾ. ಸಂಜಯ ಪಟಗಾರ, ಡಾ. ನಿತೀಶ ಶಾನಭಾಗ, ಡಾ.ನಮೃತಾ ಶಾನಭಾಗ ತಾಲೂಕಾ ವೈದ್ಯಾಧಿಕಾರಿ ನೇತೃತ್ವದಲ್ಲಿ ತಮ್ಮಿಂದಾಗಬಹುದಾದ ಎಲ್ಲ ಸಹಕಾರ ನೀಡುವುದಾಗಿ ಘೋಷಿಸಿದರು. ಉತ್ತರ ಕನ್ನಡ ಜಿಲ್ಲೆಗೆ ಪ್ರಯೋಜನವಾಗುವಂತೆ ರೋಗ ನಿದಾನ, ಚಿಕಿತ್ಸೆ, ಔಷಧಿ ಹಾಗೂ ರೋಗಿ ಮತ್ತವರ ಪೋಷಕರಿಗೆ ಮಧ್ಯಾಹ್ನದ ಊಟವನ್ನು ಉಚಿತವಾಗಿ ಕೊಡುವ ಯೋಜನೆ ಇದಾಗಿದ್ದು ಈಗಾಗಲೇ ಸಮೂಹ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಚಾರ ದೊರೆತಿದೆ. ಬಹುಸಂಖ್ಯೆಯಲ್ಲಿ ರೋಗಿಗಳು ಪ್ರಯೋಜನ ಪಡೆಯಬಹುದಾಗಿದ್ದು, ಯಾವುದೇ ಮುಂಗಡ ನೋಂದಣಿ ರಹಿತವಾಗಿದೆ ಎಂದು ತಾಲೂಕಾ ವೈದ್ಯಾಧಿಕಾರಿ ಡಾ.ಆಜ್ಞಾ ನಾಯಕ ತಿಳಿಸಿದರು. ಎನ್.ಆರ್.ಗಜು ರೋಟರಿಯ ಜನಜನಿತ ಕಾರ್ಯಗಳನ್ನು ಪ್ರಸ್ತುತ ಪಡಿಸಿದರು. ಈ ಸಂದರ್ಭದಲ್ಲಿ ಡಾ. ಮೆಹೆಕ್ ಸಿಕ್ಕಾ ಅವರನ್ನು ರೋಟರಿ ಪರವಾಗಿ ಅಭಿನಂದಿಸಲಾಯಿತು. ರೋಟರಿ ಏನ್ಸ್ ಅಧ್ಯಕ್ಷೆ ಹೇಮಾ ರಾವ್, ಜಯದೇವ ಬಳಗಂಡಿ, ಸ್ವಾತಿ ಬಳಗಂಡಿ, ರೋಟರಿ ಮತ್ತು ಏನ್ಸ್ ಕ್ಲಬ್‍ನ ಸದಸ್ಯರು ಸಾಕಷ್ಟು ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

RELATED ARTICLES  ಅಂಕೋಲಾದಲ್ಲಿ ರೂಪಾಲಿ ನಾಯ್ಕ ಗೆ ಅದ್ಧೂರಿ ಸ್ವಾಗತ: ಅಭಿಮಾನಿಗಳಿಗೆ ಧನ್ಯವಾದ ಹೇಳಿದ ರೂಪಾಲಿ

(ಲೈಫ್ ಲೈನ್ ಸಂಚಾರಿ ರೈಲು ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮಹೇಕ್ ಸಿಕ್ಕಾ ಅವರನ್ನು ರೋಟರಿ ಪರವಾಗಿ ಅಭಿನಂದಿಸಲಾಯಿತು. ಅಧ್ಯಕ್ಷ ವಸಂತ ರಾವ್, ಎನ್.ಆರ್.ಗಜು, ಡಾ.ಆಜ್ಞಾ ನಾಯಕ ಇದ್ದರು)