ಬಜಕೂಡ್ಲು : ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ನಡೆದು ಬರುತ್ತಿರುವ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪರ್ಯಾ-ಗೋಪಾಷ್ಟಮೀ ಮಹೋತ್ಸವದ 6ನೇ ದಿನ ಬುಧವಾರ ವಿವಿಧ ಕಾರ್ಯಕ್ರಮಗಳು ನೆರವೇರಿದವು. ಪ್ರತೀ ದಿನ ಬೆಳಗ್ಗೆ ಕಲಶ ಪೂಜೆ, ಶ್ರೀರಾಮಕಲ್ಪೋಕ್ತ ಪೂಜೆ, ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ, ಗೋಪಾಲಕೃಷ್ಣ ಪೂಜೆ, ಗೋಪೂಜೆ, ತುಲಸೀ ಪೂಜೆ ನಡೆದು ಬರುತ್ತಿದ್ದು ನೂರಾರು ಭಕ್ತರು ಭಾಗವಹಿಸುತ್ತಿದ್ದಾರೆ. ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಕಾರ್ಯಕರ್ತರು ಹಾಗೂ ಸ್ಥಳೀಯ ಸ್ವಯಂಸೇವಕರ ಪಾಲ್ಗೊಳ್ಳುವಿಕೆಯಿಂದ ಕಾರ್ಯಕ್ರಮ ವಿಜೃಂಭಣೆಯಿಂದ ನಡೆದುಬರುತ್ತಿದ್ದು ಸುಳ್ಯ, ಕಾಸರಗೋಡು, ಗುತ್ತಿಗಾರು, ಕೊಡಗು, ಪೆರಡಾಲ ವಲಯಗಳ ಸೇವಾಬಿಂದುಗಳು ಸೇವೆಯಲ್ಲಿ ಪಾಲ್ಗೊಂಡರು.
ಅ.28ರಂದು ಗೋಪಾಷ್ಟಮೀ ಮಹೋತ್ಸವ : ಪ್ರತೀ ವರ್ಷವೂ ದೇವೇಂದ್ರನನ್ನು ಪೂಜಿಸಿಕೊಂಡು ಬರುತ್ತಿದ್ದ ಗೋಪಾಲಕರು ಶ್ರೀಕೃಷ್ಣನ ನಿರ್ದೇಶನದಂತೆ ಗೋವರ್ಧನ ಪರ್ವತವನ್ನು ಪೂಜಿಸುವುದನ್ನು ಕಂಡು ಕ್ರೋಧಗೊಂಡ ದೇವೇಂದ್ರನು ಗೋಕುಲದ ಮೇಲೆ ಸತತ 7 ದಿನಗಳ ಕಾಲ ಮಳೆ ಸುರಿಸಿದ. ಗೋಪಾಲಕರು ಶ್ರೀಕೃಷ್ಣನ ಮೊರೆಹೋದಾಗ ಆತ ಗೋವರ್ಧನ ಪರ್ವತವನ್ನೇ ಕಿರುಬೆರಳಿನಿಂದ ಎತ್ತಿ ಹಿಡಿದು ಇಂದ್ರನ ಗರ್ವಭಂಗ ಮಾಡಿ ಗೋಪಾಲಕರನ್ನು ಹಾಗೂ ಗೋವುಗಳನ್ನು ರಕ್ಷಿಸಿದ ದಿನವೇ ಗೋಪಾಷ್ಟಮೀ. ಈ ಪ್ರಧಾನ ದಿನದಂದು ಗೋಮಯದಿಂದ ಗೋವರ್ಧನ ಪರ್ವತವನ್ನು ನಿರ್ಮಿಸಿ ಶ್ರೀಕೃಷ್ಣನನ್ನು ಪೂಜಿಸುವುದು ವಿಶೇಷತೆಯಾಗಿದೆ.
ಬೆಳಗ್ಗೆ ಕಲಶ ಪೂಜೆ, ಶ್ರೀರಾಮಕಲ್ಪೋಕ್ತ ಪೂಜೆ ಹಾಗೂ ಶ್ರೀಮದ್ವಾಲ್ಮೀಕೀ ರಾಮಾಯಣ ಮಂಗಲ, ಗೋವರ್ಧನ ಯಜ್ಞ ಪೂರ್ಣಾಹುತಿ. ಸಂಜೆ 4ಘಂಟೆಗೆ ಗೋವರ್ಧನ ಪರ್ವತದಲ್ಲಿ ಗೋಪಾಲಕೃಷ್ಣ ಪೂಜೆ, ಗೋಪೂಜೆ ವಿಶೇಷ ದೀಪಾರಾಧನೆ ಸೇವೆ ನಡೆಯಲಿದೆ.
* ಪ್ರತೀದಿನ ಮಹಾಮಂಗಳಾರತಿಯ ಪ್ರಾರ್ಥನೆ ಸಂದರ್ಭದಲ್ಲಿ ಕಷ್ಟ ಪರಿಹಾರ ಹಾಗೂ ಇಷ್ಟಾರ್ಥಕ್ಕಾಗಿ ಪ್ರಾರ್ಥಿಸಿ ಆಂಜನೇಯನಿಗೆ ಮುಷ್ಟಿದ್ರವ್ಯ ಸಮರ್ಪಣಾ ಸೇವೆ
* ಪ್ರತೀದಿನ ಗೋಪೂಜೆ, ಕಲ್ಪೋಕ್ತ ಪೂಜೆ, ತುಲಸೀಪೂಜೆ, ದೀಪಾರಾಧನೆ.