ಶಿರಸಿ : ನಗರಸಭೆಯ ಬಿಜೆಪಿ ಸದಸ್ಯರಿಗೆ ನೈತಿಕತೆ ಇದ್ದರೆ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಕಚೇರಿ ಎದುರು ಪ್ರತಿಭಟನೆ ನಡೆಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಶ್ರೀಕಾಂತ ತಾರಿಬಾಗಿಲ ತಿರುಗೇಟು ನೀಡಿದ್ದಾರೆ.ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಶಿರಸಿ ನಗರದೊಳಗಿನ ರಸ್ತೆಗಳ ಹೊಂಡ ಮುಚ್ಚಲು ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆದೇಶ ಕೂಡ ನೀಡಲಾಗಿದೆ. ಆಗಾಗ್ಗೆ ಶಿರಸಿಯಲ್ಲಿ ನಿತ್ಯ ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ಸಮಂಜಸವಾಗುವುದಿಲ್ಲ ಎಂದು ಮಳೆ ಮುಗಿಯುತ್ತಿದ್ದಂತೆ ಹೊಂಡ ಮುಚ್ಚುವಂತೆ ಸೂಚಿಸಿರುವುದು ಗೊತ್ತಿದ್ದು, ಬಿಜೆಪಿ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿರುವುದು ಹಾಸ್ಯಾಸ್ಪದ. ನಿಮ್ಮದೇ ಪಕ್ಷದ ಶಾಸಕರು ತಾವು ಸರ್ಕಾರದ ಒಂದು ಭಾಗ ಎಂದು ಹೇಳುತ್ತಾರೆ. ಅಭಿವೃದ್ಧಿ ವಿಚಾರ ಬಂದಾಗ ತನಗೆ ಸಂಬಂಧವಿಲ್ಲ ಎಂದು ಪದೇ ಪದೇ ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ನಗರಸಭೆಯಲ್ಲಿ ತಮ್ಮದು ಜವಾಬ್ದಾರಿ ಇದೆ ಎಂಬುದು ಅವರಿಗೆ ತಿಳಿದಿಲ್ಲವೇ? ತಾವು ಶಾಸಕರಾದ ಮೇಲೆ ಶಿರಸಿ ನಗರದ ಅಭಿವೃದ್ಧಿಗೆ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು. ಐದು ಬಾರಿ ಶಾಸಕರಾದ ಕಾಗೇರಿ ಒಂದೇ ಒಂದು ವಿಶೇಷ ಅನುದಾನ ತರಲಾರದಷ್ಟು ನಿಷ್ಕ್ರೀಯರಾಗಿದ್ದಾರೆ. ಹಾಗಾದರೇ ನಮಗೆ ಶಾಸಕರು ಏಕೆ ಬೇಕು. ಕೇವಲ ನಗರಸಭೆಯ ಸದಸ್ಯೆರಷ್ಟೇ ಇದ್ದರೆ ಸಾಕಲ್ಲವೇ? ಎಂದು ಪ್ರಶ್ನಿಸಿದರು.
ಐದು ತಿಂಗಳ ಹಿಂದೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಭಿವೃದ್ಧಿಗೆ ಶಾಸಕರ ಅಧ್ಯಕ್ಷತೆಯಲ್ಲಿ ಪಕ್ಷಾತೀತವಾಗಿ ಸಮಿತಿ ರಚನೆ ಮಾಡಲಾಗಿತ್ತು. ಆದರೆ ಐದು ತಿಂಗಳು ಕಳೆದರೂ ಒಮ್ಮೆಯೂ ಸಭೆ ನಡೆಸಿ ಅಭಿವೃದ್ಧಿ ಕುರಿತು ಚರ್ಚೆ ನಡೆಸಿಲ್ಲ. ಹೀಗಾದರೆ ಪ್ರಗತಿ ಹೇಗೆ ಸಾಧ್ಯ. ಶಾಸಕರು ಇನ್ನಾದರೂ ಜವಾಬ್ದಾರಿ ಅರಿಯಬೇಕು. ಅಲ್ಲದೇ ಕೇಂದ್ರ ಸರ್ಕಾರದಿಂದ ನಗರಸಭೆಗೆ ಬರಬೇಕಾದ ಮನೆ ನಿರ್ಮಾಣದ ಹಣವೂ ಬಾಕಿಯಿದೆ. ಇದರ ಬಗ್ಗೆ ಶಾಸಕರು ಪ್ರಯತ್ನಿಸಬೇಕು. ಊರಿನ ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಬಾರದು ಎಂದ ಅವರು, ಕಡೂರು ಶಾಸಕರಾದ ವೈ.ಎಸ್.ದತ್ತ ಅವರು ಇಲ್ಲಿ ಬಂದು ಕೆಲಸ ಮಾಡುತ್ತಾರೆ. ಸ್ಥಳೀಯ ಶಾಸಕರಿಗೆ ವಿಶೇಷ ಅನುದಾನ ತಂದು ಕೆಲಸ ಮಾಡಲು ಏನಾಗಿದೆ? ಸರ್ಕಾರದ ಮೇಲೆ ಹೊಣೆ ಹಾಕಿ ಜವಾಬ್ದಾರಿ ಇಲ್ಲದಂತೆ ವರ್ತಿಸುತ್ತಾರೆ. ಇನ್ನಾದರೂ ಶಾಸಕರು ಬಣ್ಣದ ಮಾತನಾಡುವುದನ್ನು ಬಿಡಬೇಕು ಎಂದರು.
ನಗರಸಭೆ ಅಧ್ಯಕ್ಷೆ ಅರುಣಾ ವೆರ್ಣೇಕರ್ ಮಾತನಾಡಿ, ನಗರದ ರಸ್ತೆಗಳ ಹೊಂಡಗಳನ್ನು ತುಂಬಲು 3.5 ಲಕ್ಷ ರೂ.ಗಳ ಟೆಂಡರ್ ಈಗಾಗಲೇ ಕರೆಯಲಾಗಿದೆ. ಇದರ ಬಗ್ಗೆ ಸ್ವಲ್ಪವೂ ಅರಿವಿಲ್ಲದಂತೆ ಬಿಜೆಪಿ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ. ಇದು ಅವರು ನಿದ್ದೆಯಲ್ಲಿರುವುದನ್ನು ತೋರಿಸುತ್ತದೆ. ಈಗಾಗಲೇ ಟೆಂಡರ್ ಕರೆದು ಕಾಮಗಾರಿ ಆದೇಶ ಸಹ ನೀಡಲಾಗಿದೆ. ಅದನ್ನು ತಿಳಿದುಕೊಳ್ಳದೆ ನಗರಸಭೆ ನಿದ್ದೆಯಲ್ಲಿದೆ ಎಂದು ಬಿಜೆಪಿ ಸದಸ್ಯರು ಆರೋಪಿಸಿದ್ದಾರೆ. ಮಳೆ ಇಲ್ಲದೇ ಹೋದರೆ ಈಗಾಗಲೇ ಹೊಂಡಗಳನ್ನು ತುಂಬಲಾಗುತ್ತಿತ್ತು. ಪ್ರತಿ ದಿನವೂ ಮಳೆ ಬರುತ್ತಿರುವ ಕಾರಣ ಅದು ಪೂರ್ತಿಯಾಗಿ ನಿಂತ ಮೇಲೆ ರಸ್ತೆ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ. ಇದರೊಂದಿಗೆ ನಗರದ ರಸ್ತೆಯ ಸಂಪೂರ್ಣ ಅಭಿವೃದ್ಧಿಗೆ ಸಚಿವರಿಗೆ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ದುಭಾಶಿ ಮಾತನಾಡಿ, ಶಿರಸಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಇಂದಿರಾ ಕ್ಯಾಂಟೀನ್ ಆರಂಭಿಸಲಾಗುವುದು. ಈ ಬಗ್ಗೆ ಸರ್ಕಾರದಿಂದ ಆದೇಶವೂ ಸಹ ದೊರಕಿದ್ದು, ಸ್ಥಳದ ಹುಡುಕಾಟ ನಡೆಯುತ್ತಿದೆ. ಅಲ್ಲದೇ ಸದ್ಯದಲ್ಲಿಯೇ ಸಾರಿಗೆ ಸಚಿವರು ಮತ್ತು ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಶಿರಸಿ ಹಾಗೂ ಸಿದ್ದಾಪುರ ಬಸ್ ನಿಲ್ದಾಣದ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲಾಗುತ್ತದೆ. ಜಾತ್ರೆಗೆ ವಿಶೇಷ ಅನುದಾನದ ಕುರಿತು ಸರ್ಕಾರ ಪತ್ರ ಬರೆಯಲಾಗಿದೆ ಹಾಗೂ ಚಿಪಗಿಯಿಂದ ಇಸಳೂರುವರೆಗಿನ ನೂತನ ರಸ್ತೆಗೆ ಅನುದಾನಕ್ಕಾಗಿ ಪ್ರಸ್ತಾವನೆ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದ ಅವರು, ನಮ್ಮ ಪಕ್ಷದ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ಹಾಗೂ ನಮ್ಮ ಪ್ರಯತ್ನದಿಂದ ಸಾಕಷ್ಟು ಅನುದಾನ ತಂದಿದ್ದೇವೆ. ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಅವಧಿಯಲ್ಲಿ ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಸ್ಪಷ್ಟಪಡಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ರಾಚಪ್ಪ ಜೊಗಳೇಕರ, ಪ್ರವೀಣ ಹೆಗಡೆ, ಡಿಸಿಸಿ ಕಾರ್ಯಾಲಯದ ಕಾರ್ಯದರ್ಶಿ ಸತೀಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.