ಕಾರವಾರ: ಜನಪದ ಸಿಮೆಂಟ್ ಶಿಲ್ಪಕಲಾ ಶಿಬಿರವು ಇಲ್ಲಿನ ಮಯೂರವರ್ಮ ವೇದಿಕೆಯ ಆವಾರದಲ್ಲಿ ಶನಿವಾರ ನಡೆಯಿತು.
ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಜಿಲ್ಲಾಡಳಿತದ ಆಶ್ರಯದಲ್ಲಿ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಉದ್ಘಾಟಿಸಿ, ಮಾತನಾಡಿ, ಶಿಬಿರದಲ್ಲಿ ಜಿಲ್ಲೆಯ ವಿವಿಧ ಬುಡಕಟ್ಟು ಜನಾಂಗದ ಸನ್ನಿವೇಶಗಳನ್ನು ಕಲಾವಿದರು ತಯಾರು ಮಾಡಲಿದ್ದಾರೆ.ಅದನ್ನು ಉದ್ದೇಶಿಸಿರುವ ರಾಕ್ ಗಾರ್ಡನ್ ನಲ್ಲಿ ಇರಿಸಲಾಗುವುದು ಎಂದರು.
ರಾಜ್ಯದ ವಿವಿಧೆಡೆಯಿಂದ 20 ಮಂದಿ ಕಲಾವಿದರು ಶಿಬಿರದಲ್ಲಿ ಭಾಗವಹಿಸಿದ್ದರು. ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ನಗರಸಭೆಯ ಅಧ್ಯಕ್ಷ ಗಣಪತಿ ನಾಯ್ಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಮಕೃಷ್ಣ ನಾಯಕ, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ರಿಜಿಸ್ಟ್ರಾರ್ ಇಂದ್ರಮ್ಮ ಎಚ್., ಶಿಬಿರದ ನಿರ್ದೇಶಕ ರಘು ಎಂ., ಸಂಚಾಲಕ ಬಾಬು ಎಂ. ಉಪಸ್ಥಿತರಿದ್ದರು.