ಪೆರ್ಲ : ಮುಳ್ಳೇರಿಯ ಹವ್ಯಕ ಮಂಡಲದ ನೇತೃತ್ವದಲ್ಲಿ ಬಜಕೂಡ್ಲು ಅಮೃತಧಾರಾ ಗೋಶಾಲೆಯಲ್ಲಿ ಕಳೆದ 9 ದಿನಗಳಿಂದ ನಡೆದುಬರುತ್ತಿರುವ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣ ನವಾಹ ಹಾಗೂ ಗೋಮಾತಾ ಸಪರ್ಯಾ-ಗೋಪಾಷ್ಟಮೀ ಮಹೋತ್ಸವದ ಶ್ರೀಮದ್ವಾಲ್ಮೀಕೀ ರಾಮಾಯಣ ಪಾರಾಯಣವು ಶನಿವಾರ ಮಂಗಲವಾಯಿತು. ಭಾನುವಾರ (ಇಂದು) ಬೆಳಗ್ಗೆ ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವವು ನಡೆಯಲಿರುವುದು.

ಗೋಶಾಲೆಯ `ಸಾಕೇತ’ ಮಂಟಪದಲ್ಲಿ ಶನಿವಾರ ಪೂರ್ವಾಹ್ನ ಕಲಶ ಪೂಜೆ, ಶ್ರೀರಾಮ ಕಲ್ಪೋಕ್ತ ಪೂಜೆ ಹಾಗೂ ಅಪರೂಪದ ಗೋವರ್ಧನ ಯಜ್ಞ ಪೂರ್ಣಾಹುತಿಗೊಂಡಿತು. ಅಪರಾಹ್ನ ಮಾತೆಯರಿಂದ ಕುಂಕುಮಾರ್ಚನೆ, ಬದಿಯಡ್ಕ ಶ್ರೀಮಾತಾ ಹವ್ಯಕ ಭಜನ ಸಂಘ ಹಾಗೂ ಬಜಕೂಡ್ಲು ಶ್ರೀ ಮಹಾಲಿಂಗೇಶ್ವರ ಭಜನ ಸಂಘದವರು ಭಜನ ಸೇವೆ ನಡೆಸಿಕೊಟ್ಟರು. ಮುಳ್ಳೇರಿಯ ಹವ್ಯಕ ಮಂಡಲ ಅಧ್ಯಕ್ಷ ಪ್ರೊ.ಶ್ರೀಕೃಷ್ಣ ಭಟ್, ವೇದಮೂರ್ತಿ ದರ್ಭೆ ಮಹಾಬಲ ಭಟ್, ಸಾಮಾಜಿಕ ಹಾಗೂ ಧಾರ್ಮಿಕ ನೇತಾರ ಪೆಲ್ತಾಜೆ ಸುಬ್ರಹ್ಮಣ್ಯ ಭಟ್, ಎಣ್ಮಕಜೆ ಗ್ರಾಮಪಂಚಾಯತ್ ಅಧ್ಯಕ್ಷೆ ರೂಪವಾಣಿ ಆರ್. ಭಟ್ ಹಾಗೂ ಗ್ರಾ.ಪಂ.ಸದಸ್ಯರು, ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಆಮೆಕ್ಕಳ, ಬಿ.ಜಿ.ರಾಮ ಭಟ್, ಬಾಲಸುಬ್ರಹ್ಮಣ್ಯ ಸರ್ಪಮಲೆ, ಕುಮಾರ ಸುಬ್ರಹ್ಮಣ್ಯ ಪೈಸಾರಿ, ಪತ್ತಡ್ಕ ಗಣಪತಿ ಭಟ್, ನವನೀತ ಪ್ರಿಯ ಕೈಪಂಗಳ, ಮಹೇಶ ಸರಳಿ, ಪೆರ್ಲ ಕೃಷಿಭವನದ ಅಧಿಕಾರಿಗಳು, ಮಂಜೇಶ್ವರ ಬ್ಲೋಕ್ `ಬಂಗಾರಿ’ ಎಫ್.ಇ.ಒ. ಸದಸ್ಯರು, ಮುಳ್ಳೇರಿಯ ಹವ್ಯಕ ಮಂಡಲದ ವಿವಿಧ ವಲಯಗಳ ಗುರಿಕಾರರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನ ಸಾತ್ವಿಕ ಭೋಜನದೊಂದಿಗೆ ಶ್ರೀಮಠದ ಸಿಹಿತಿಂಡಿಯಾದ `ಅಮೃತ ಫಲ’ವನ್ನು ನೂರಾರು ಭಕ್ತರು ಸವಿದರು.

RELATED ARTICLES  ಮಾ. 25ರಿಂದ ಮನ್ನಿಕೇರಿ ಮಹಾಂತಲಿಂಗೇಶ್ವರ ಜಾತ್ರೆ